ಇತಿಹಾಸಕ್ಕೆ ಸಾಕ್ಷಿಯಾದ ಜಹಗೀರ್ ದಾರ್ ಬಂಗಲೆ: ಇದು ಎಲ್ಲಿದೆ? ವಿವರವೇನು..?
ಚಾಮರಾಜನಗರ, ಅಕ್ಟೋಬರ್ 18: ಜಿಲ್ಲೆಗೊಂದು ಸುತ್ತುಹೊಡೆದರೆ ಹತ್ತಾರು ವಿಶೇಷತೆಗಳು ಇಲ್ಲಿ ಎದ್ದು ಕಾಣಿಸುತ್ತವೆ. ಇಂತಹ ವಿಶೇಷತೆಗಳ ನಡುವೆ ಶತಮಾನಗಳ ಇತಿಹಾಸ ಕಂಡಿರುವ ಬಂಗಲೆಯೊಂದು ನಮ್ಮನ್ನು ಆಕರ್ಷಿಸುತ್ತದೆ ಅದುವೇ ಜಹಗೀರ್‌ದಾರ್ ಬಂಗಲೆ. ಇದು ಜಿಲ್ಲೆಯ ಯಳಂದೂರಿನಲ್ಲಿದ್ದು, ಇವತ್ತು ಜಿಲ್ಲಾ ವಸ್ತು ಸಂಗ್ರಹಾಲಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ.
ಹಾಗೆನೋಡಿದರೆ ಜಹಗೀರ್ ದಾರ್ ಬಂಗಲೆಯು ಬರೀ ಬಂಗಲೆಯಾಗಿ ಉಳಿದಿಲ್ಲ. ಇದು ಮೈಸೂರು ಮಹಾರಾಜರ ಕಾಲಕ್ಕೆ ಎಳೆದೊಯ್ಯುತ್ತದೆ. ಅಷ್ಟೇ ಅಲ್ಲದೆ ಮೈಸೂರು ಅರಸರ ಕಾಲದಲ್ಲಿ ತನ್ನದೇ ಛಾಪು ಮೂಡಿಸಿದ್ದ ದಿವಾನ್ ಪೂರ್ಣಯ್ಯನವರನ್ನು ಸದಾ ಸ್ಮರಿಸುವಂತೆ ಮಾಡುತ್ತಿದೆ. ಇದು ಸಾಮಾನ್ಯವಾಗಿ ಕಾಣಸಿಗುವ ಬಂಗಲೆಗಳ ಪೈಕಿ ಅಪರೂಪದ ವಿನ್ಯಾಸದಿಂದ ನಿರ್ಮಾಣಗೊಂಡಿರುವ ಬಂಗಲೆಯಾಗಿದ್ದು, ಆಕರ್ಷಣೀಯವಾಗಿದೆ. ಅವತ್ತಿನ ವೈಭವವನ್ನು ಸಾರಿ ಹೇಳುವಂತಿದೆ.

ಜಹಗೀರ್‌ದಾರ್ ಬಂಗಲೆ ಯಳಂದೂರಿನಲ್ಲಿ ನಿರ್ಮಾಣವಾಗಿದ್ದು ಹೇಗೆ? ಎಂಬುದನ್ನು ನೋಡುತ್ತಾ ಹೋದರೆ ಅಲ್ಲಿ ದಿವಾನ್ ಪೂರ್ಣಯ್ಯನವರು ಮುನ್ನಲೆಗೆ ಬರುತ್ತಾರೆ. ಮೈಸೂರು ಸಂಸ್ಥಾನದಲ್ಲಿ ದಿವಾನ್ ಪೂರ್ಣಯ್ಯ ಅವರ ಹೆಸರು ಕೇಳದವರಿಲ್ಲ. ಅವರು ಒಬ್ಬ ಉತ್ತಮ ಆಡಳಿತಗಾರರಾಗಿದ್ದರು. ಇವರು ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರು ಅರಸರ ಕಾಲದಲ್ಲಿ ದಿವಾನರಾಗಿ ಸೇವೆ ಸಲ್ಲಿಸಿ ಮೈಸೂರು ಪ್ರಾಂತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
1907ರಲ್ಲಿ ಜಹಗೀರ್ ದಾರ್ ಬಂಗಲೆ ನಿರ್ಮಾಣ
ಇವರಲ್ಲಿದ್ದ ಸಂಘಟನಾ ಹಾಗೂ ಆಡಳಿತ ಚತುರತೆಯನ್ನು ಮೆಚ್ಚಿದ ಅಂದಿನ ಮೈಸೂರು ಒಡೆಯರ್ ಆಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಫಲವತ್ತಾದ 33 ಕೆರೆಗಳುಳ್ಳ, 6ಪ್ರಭೇದದ ಸಸ್ಯವರ್ಗವನ್ನು ಹೊಂದಿದ ಕವಿಗಳ ಬೀಡೆಂಬ ಖ್ಯಾತಿಪಡೆದಿದ್ದ ಹದಿನಾಡು ಪ್ರಾಂತ್ಯವಾದ ಯಳಂದೂರು ತಾಲ್ಲೂಕನ್ನು ಬ್ರಿಟಿಷರ ಒಪ್ಪಿಗೆ ಮೇರೆಗೆ ಜಹಗೀರ್‌ದಾರರಾಗಿ ದಿವಾನ್ ಪೂರ್ಣಯ್ಯರವರಿಗೆ ನೀಡಿದ್ದರು.
ಆ ನಂತರದ ಕಾಲದಲ್ಲಿ ಈ ಭೂಮಿಯಲ್ಲಿ ದಿವಾನ್ ಪೂರ್ಣಯ್ಯನವರ ಸ್ಮರಣಾರ್ಥ ಬಂಗಲೆಯನ್ನು ನಿರ್ಮಿಸಿ ಇತಿಹಾಸದ ಪುಟಗಳಲ್ಲಿ ಅವರ ಹೆಸರನ್ನು ಚಿರಸ್ಥಾಯಿ ಮಾಡಬೇಕೆನ್ನುವ ಉದ್ದೇಶದಿಂದ ಅವರ ವಂಶಸ್ಥರಾದ ಪಿ.ಎನ್.ಕೃಷ್ಣಮೂರ್ತಿರವರು 1907ರಲ್ಲಿ ಯಳಂದೂರಿನಲ್ಲಿ ನಾಲ್ಕು ಕಲೆ ಮತ್ತು ವಾಸ್ತುಶಿಲ್ಪಗಳನ್ನೊಳಗೊಂಡ ಭವ್ಯ ಕಟ್ಟಡ ನಿರ್ಮಿಸಿದರು. ಅದರಲ್ಲಿ ಜಹಗೀರ್‌ದಾರ್ ಬಂಗಲೆಯೂ ಒಂದಾಗಿದೆ.

ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದ್ದ ಬಂಗಲೆ
1956ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಿ ಏಕೀಕರಣಗೊಂಡ ಬಳಿಕ ದಿವಾನ್ ಪೂರ್ಣಯ್ಯರವರ ವಂಶಸ್ಥರು ವಿವಿಧ ಉದ್ದೇಶಗಳಿಂದ ಬೆಂಗಳೂರಿಗೆ ಸ್ಥಳಾಂತರಗೊಂಡರು. ಹೀಗಾಗಿ ಜಹಗೀರ್‌ದಾರ್ ಬಂಗಲೆ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿತ್ತು. ಆದರೆ ಸಕಾಲದಲ್ಲಿ ಸಂಸದ ದಿವಂಗತ ಧ್ರುವನಾರಾಯಣ್‌ರವರು ತೆಗೆದುಕೊಂಡ ತೀರ್ಮಾನ ನೇಪಥ್ಯಕ್ಕೆ ಸರಿಯುತ್ತಿದ್ದ ಐತಿಹಾಸಿಕ ಬಂಗಲೆಯೊಂದು ಮುಂದಿನ ತಲೆಮಾರಿಗೂ ಉಳಿಯುವಂತಾಗಿದ್ದು ವಿಶೇಷವೇ.
ಸುಮಾರು ಹದಿಮೂರು ವರ್ಷಗಳಿಗೂ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ಬಂಗಲೆಯನ್ನು ಅಂದಿನ ಸಂಸದ ಆರ್.ಧ್ರುವನಾರಾಯಣ್ ಅವರು ಸ್ಮಾರಕವಾಗಿ ಉಳಿಸಿ ಪ್ರವಾಸಿಗರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ರಾಜ್ಯ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ ಇಲಾಖೆಗಳ ನಿರ್ದೇಶಕರಾಗಿದ್ದ ಡಾ.ಆರ್.ಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ದಿವಾನ್ ಪೂರ್ಣಯ್ಯರವರ ವಂಶಸ್ಥರ ಮನವೊಲಿಸುವಲ್ಲಿಯೂ ಯಶಸ್ವಿಯಾದರು. ಅದರ ಪರಿಣಾಮ ಪಾಳು ಬಂಗಲೆ ಜಿಲ್ಲಾ ವಸ್ತು ಸಂಗ್ರಹಾಲಯವಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಜಿಲ್ಲಾ ವಸ್ತು ಸಂಗ್ರಹಾಲಯವಾಗಿ ಬಂಗಲೆ
ಅವತ್ತು ಅವರು ಬಂಗಲೆಗೆ ಕಾಯಕಲ್ಪ ನೀಡಿ ಕಟ್ಟಡದ ಪುನಶ್ಚೇತನಕ್ಕಾಗಿ ಶ್ರಮಿಸಿದ್ದರಿಂದ ರಾಜ್ಯ ಪ್ರಾಚ್ಯ ವಸ್ತು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯದ ಇಲಾಖಾವತಿಯಿಂದ 50 ಲಕ್ಷ ರೂ. ಹಣ ಬಿಡುಗಡೆಯಾಯಿತು. ಆದರೆ ಈ ಸಂದರ್ಭದಲ್ಲಿ ದಿವಾನ್ ಪೂರ್ಣಯ್ಯರವರ 8ನೇ ತಲೆಮಾರಿನ ಮರಿಸೊಸೆ ಸುಕನ್ಯಾ ಪೂರ್ಣಯ್ಯರವರ ಜಹಗೀರ್ ದಾರ್ ಬಂಗಲೆಯನ್ನು ಜಿಲ್ಲಾ ವಸ್ತು ಸಂಗ್ರಹಾಲಯವಾಗಿ ರೂಪುಗೊಳಿಸಿ ಅದಕ್ಕೆ ದಿವಾನ್ ಪೂರ್ಣಯ್ಯ ಸ್ಮಾರಕ ಜಿಲ್ಲಾ ವಸ್ತು ಸಂಗ್ರಹಾಲಯ ಎಂದು ಹೆಸರಿಟ್ಟು, ವಸ್ತು ಸಂಗ್ರಹಾಲಯದ ಹಿಂಭಾಗದಲ್ಲಿರುವ ತಮ್ಮ ಖಾಲಿ ನಿವೇಶನದಲ್ಲಿ ತಾವು ಉಳಿದುಕೊಳ್ಳಲು ಒಂದು ಮನೆ ನಿರ್ಮಿಸಿಕೊಡಬೇಕೆಂದು ಷರತ್ತು ವಿಧಿಸಿದರು.
ಇವರ ಷರತ್ತಿಗೆ ಮನ್ನಣೆ ನೀಡಿದ ಸರ್ಕಾರ ಜಹಗೀರ್ ದಾರ್ ಬಂಗಲೆಗೆ ದಿವಾನ್ ಪೂರ್ಣಯ್ಯ ಸ್ಮಾರಕ ಜಿಲ್ಲಾ ವಸ್ತು ಸಂಗ್ರಹಾಲಯ ಎಂದು ಆದೇಶವನ್ನು, 20ನೇ ನವೆಂಬರ್ 2011ರಂದು ಹೊರಡಿಸಿ, ದಿನಾಂಕ 23/11/2011 ರಿಂದ 22/11/2044ರವರೆಗೆ 33 ವರ್ಷಗಳ ಕಾಲ ಪ್ರತಿ ವರ್ಷ ಒಂದು ಸಾವಿರ ರೂ.ಗಳ ಬಾಡಿಗೆಯಂತೆ 33 ಸಾವಿರ ರೂ.ಗಳಿಗೆ ಭೋಗ್ಯಕ್ಕೆ ಪಡೆಯಲು ಜಂಟಿ ಒಪ್ಪಂದದ ಪತ್ರಕ್ಕೆ ಯಳಂದೂರಿನ ಉಪ ನೊಂದಣಾಧಿಕಾರಿ ಕಚರಿಯಲ್ಲಿ ಸಹಿ ಹಾಕಿತು. ಹೀಗಾಗಿ ಶತಮಾನಗಳ ಇತಿಹಾಸ ಬಂಗಲೆಯೊಂದು ಸ್ಮಾರಕವಾಗಿ ಉಳಿದು ಸಾರ್ವಜನಿಕ ಸೇವೆಗೆ ಲಭ್ಯವಾಗಲು ಸಾಧ್ಯವಾಯಿತಲ್ಲದೆ, ಇವತ್ತು ಪ್ರವಾಸಿ ತಾಣವಾಗಿ ಗಮನ ಸೆಳೆಯಲು ಸಾಧ್ಯವಾಗಿದೆ.












Click it and Unblock the Notifications