ಗುಂಡ್ಲುಪೇಟೆ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಮತ್ತೆ ಆರಂಭ
ಚಾಮರಾಜನಗರ, ಅಕ್ಟೋಬರ್ 29: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ರಸ್ತೆ ದುರಸ್ಥಿ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ 13 ದಿನಗಳ ಬಳಿಕ ಮತ್ತೆ ಆರಂಭಗೊಂಡಿದೆ.
ಇತ್ತೀಚೆಗೆ ಬಿದ್ದ ಮಳೆಗೆ ಗೋಪಾಲಸ್ವಾಮಿ ಬೆಟ್ಟದ ರಸ್ತೆಯ ಹಲವು ಕಡೆ ರಸ್ತೆ ಕೊರೆದು ಮಂಡಿಯುದ್ದ ಹಳ್ಳಗಳಾಗಿದ್ದ ಕಾರಣ ಅಕ್ಟೋಬರ್ 16 ಭಾನುವಾರದಂದು ಸಾರಿಗೆ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಸದ್ಯ ಅಧಿಕಾರಿಗಳು ಕೊರೆದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದು ಎರಡು ಮಿನಿ ಬಸ್‌ಗಳ ಸಂಚಾರ ಮತ್ತೆ ಆರಂಭಗೊಂಡಿದೆ. ಇದರಿಂದ ಮತ್ತೆ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟದ ಕಡೆಗೆ ಸಂಚಾರ ಆರಂಭಿಸಬಹುದಾಗಿದೆ.

ಗೋಪಾಲಸ್ವಾಮಿ ಬೆಟ್ಟ ಕಣ್ತುಂಬಿಕೊಳ್ಳಲು ಇದು ಸೂಕ್ತ ಸಮಯ
ಈ ಬಗ್ಗೆ ಗೋಪಾಲಸ್ವಾಮಿ ಬೆಟ್ಟದ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ಮಾತನಾಡಿದ್ದು, ''ರಸ್ತೆ ದುರಸ್ಥಿ ಪಡಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿರುವ ಕಾರಣ ಪ್ರವಾಸಿಗರು ಹಾಗೂ ಭಕ್ತರು ಬೆಟ್ಟಕ್ಕೆ ಎಂದಿನಂತೆ ಆಗಮಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ. ಇನ್ನು ವಾರಾಂತ್ಯ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರ ದಂಡೇ ಹರಿದು ಬರುತ್ತಿದ್ದು ಗೋಪಾಲಸ್ವಾಮಿ ಬೆಟ್ಟವನ್ನು ಕಣ್ತುಂಬಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಮಧ್ಯಾಹ್ನವಾದರೂ ಮಂಜು ಮುಸುಕಿರುವ ವಾತಾವರಣವನ್ನು ರಾಜ್ಯದ ಮೂಲೆ ಮೂಲೆಯಿಂದ ಬಂದ ಜನರು ಕಣ್ತುಂಬಿಕೊಂಡಿದ್ದಾರೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಗೋಪಾಲಸ್ವಾಮಿ ಬೆಟ್ಟ
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 14 ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ಕೃಷ್ಣ (ವೇಣುಗೋಪಾಲ ಸ್ವಾಮಿ) ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹವಿದೆ.

ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ
ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಯರಾದ ಸತ್ಯಭಾಮ, ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿ ಹಸು ಮತ್ತು ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ. ವೇಣುಗೋಪಾಲಸ್ವಾಮಿ ದೇವಾಲಯದ ಸುತ್ತಲಿನ ಪ್ರದೇಶವು ಅತ್ಯಂತ ಹಸಿರಾಗಿದ್ದು ನಯನ ಮನೋಹರವಾಗಿದೆ. ಹೆಚ್ಚಿನ ದಿನಗಳಲ್ಲಿ ದೂರದಲ್ಲಿ ಕಾಣುವ ಬಿಳಿ ಮೋಡವು ಮಂಜು ಮುಸುಕಿದ ಅನಿಸಿಕೆ ನೀಡುತ್ತದೆ. ಹಾಗಾಗಿ "ಹಿಮವದ್" ಎಂಬ ಹೆಸರು ಬಂದಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವುರಿಂದ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ಇದೆ. ಈ ಕಾರಣಕ್ಕಾಗಿ ಸರ್ಕಾರಿ ಬಸ್‌ಗಳಲ್ಲಿ ಮಾತ್ರ ಬೆಟ್ಟಕ್ಕೆ ಜನರು ತೆರಳುತ್ತಿದ್ದರು. ರಸ್ತೆ ಕೊರಕಲಿನಿಂದ ಸ್ಥಗಿತಗೊಂಡಿದ್ದ ಸಂಚಾರ ಈಗ ಮತ್ತೇ ಆರಂಭವಾಗಿದೆ.

ಮತ್ತೆ ಬಸ್ ಸಂಚಾರ ಆರಂಭ, ಪ್ರವಾಸಿಗರಿಗೆ ಸಂತಸ
ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ದೊಡ್ಡ ತಿರುವು ಸೇರಿದಂತೆ ಹಲವು ಕಡೆ ರಸ್ತೆ ಕೊರೆತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗೋಪಾಲಸ್ವಾಮಿ ಬೆಟ್ಟಕ್ಕೆ, ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಂತಹ ನೂರಾರು ಭಕ್ತರನ್ನು ವಾಪಸ್ ಕಳುಹಿಸಲಾಗಿತ್ತು. ಇದೀಗ ಮತ್ತೆ ಬಸ್ ಸಂಚಾರ ಆರಂಭವಾಗಿದ್ದು, ಭಕ್ತರು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications