ನನ್ನ ಸೇವೆ ಬೇಕು ಎಂದರೆ ವರುಣಾ ಜನರು ಸಹಾಯ ಮಾಡುತ್ತಾರೆ-ವಿ.ಸೋಮಣ್ಣ
ಚಾಮರಾಜನಗರ, ಏಪ್ರಿಲ್ 29: ವರುಣಾದಲ್ಲಿ ಸೋಮಣ್ಣ ಗಲಾಟೆ ಮಾಡಿಸಿದ್ದು ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿದ್ದರಾಮಯ್ಯ ಮತ್ತೆ ಯಾಕೆ ಈ ರೀತಿ ಮಾಡಿ ಚಿಕ್ಕವರಾಗುತ್ತಿದ್ದಾರೆ ಗೊತ್ತಿಲ್ಲ ಎಂದು ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದ ಉಗನೇಯ್ಯನ ಹುಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿರಲಿಲ್ಲ. ನಾವು ಪ್ರಚಾರಕ್ಕೆ ಹೋದರೆ ರಸ್ತೆಗೆ ಅಡ್ಡಲಾಗಿ ನೊಗ ಇಡುತ್ತಾರೆ. ಆಚೆಗೆ ಹೋಗಬಾರದು ಅಂತಾರೆ. ಒಂದೇ ವರ್ಗದ ಜನ. ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.

ಗಲಾಟೆ ಮಾಡುವವರನ್ನು ಪೊಲೀಸ್‌ನವರಿಗೆ ಹಿಡಿದುಕೊಟ್ಟರೂ, ಪೊಲೀಸರು ಬಿಟ್ಟು ಕಳುಹಿಸುತ್ತಾರೆ. ಅವರ ಮೇಲೆ 326ರ ಅಡಿ ಪ್ರಕರಣ ದಾಖಲಿಸಬೇಕು. ಏನಾದರೂ ಪಿತೂರಿ ಮಾಡಲಿ, ಭಗವಂತ, ಚಾಮುಂಡಿ ತಾಯಿ ಇದ್ದಾರೆ. ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಎಂದರೆ ಕ್ಷೇತ್ರದ ಜನರು ಸಹಾಯ ಮಾಡುತ್ತಾರೆ. ಮಾಡದೇ ಇದ್ದರೂ ನನಗೆ ಬೇಸರವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ. ಅದೆಷ್ಟು ಚೆನ್ನಾಗಿ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ. ಯಾವ ರೀತಿ ಜನರು ಒದ್ದಾಡುತ್ತಿದ್ದಾರೆ ನೋಡಲಿ. ನಾನು ಒಬ್ಬನೇ ಅವರ ಜೊತೆಗೆ ಬರುತ್ತೇನೆ ಹೋಗೋಣ. ಸಿದ್ದರಾಮಯ್ಯ ಕರೆದರೆ ಹೋಗಲೂ ನಾನು ಸಿದ್ಧ, ಹೋಗಿ ಸುತ್ತಾಡೋಣ. ಅವರ ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನಿಸಿದರೆ, ಅವರಿಗೆ ನಮಸ್ಕಾರ ಮಾಡಿ ನಾನು ಏನೂ ಮಾತಾಡಲ್ಲ ಎಂದರು.

ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ತೀರ್ಮಾನ ಮಾಡುತ್ತಾರೆ. ಹಿಂದೆ ನೀವೂ ಸೋತಾಗ ಮಂತ್ರಿಯಾಗಿದ್ರಷ್ಟೇ. ಇವತ್ತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ನಿಂತಿದ್ದೀರಾ. ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಬಿಟ್ಟು, ವಾಸ್ತಾವಾಂಶಕ್ಕೆ ಗಮನ ಕೊಟ್ಟರೆ ಉತ್ತಮ ಎಂದು ಹೇಳಿದರು.












Click it and Unblock the Notifications