ಚಾಮರಾಜನಗರದ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಗೂ ಸಮವಸ್ತ್ರ!

ಚಾಮರಾಜನಗರ, ಫೆಬ್ರವರಿ 27; ಕಲಿಕೆ ಜೊತೆಯಲ್ಲಿಯೇ ಶಿಸ್ತು, ಸಂಯಮ, ಏಕತೆ, ಸಮಾನತೆಯನ್ನು ಕಲಿಸಿಕೊಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಧರಿಸುವ ಪದ್ಧತಿ ಜಾರಿಗೆ ಬಂದಿದೆ. ಈ ಸಮವಸ್ತ್ರಗಳು ಹೇಗಿರಬೇಕೆಂದು ಆಯಾಯ ಶಾಲಾ ಆಡಳಿತ ಮಂಡಳಿ ತೀರ್ಮಾನ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ.

ಇದೀಗ ಹಿಜಾಬ್ ವಿವಾದ ಮುನ್ನಲೆಗೆ ಬಂದ ಹಿನ್ನಲೆಯಲ್ಲಿ ಸಮವಸ್ತ್ರ ಹೊರತು ಪಡಿಸಿ ಬೇರೆ ಯಾವುದೇ ವಸ್ತ್ರಗಳನ್ನು ಧರಿಸದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಸಮವಸ್ತ್ರಗಳ ಕುರಿತಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಲೇ ಇದೆ.

ಅದು ಏನೇ ಇರಲಿ. ಆದರೆ ಇದೆಲ್ಲದರ ನಡುವೆ ಕಳೆದ ಐದೂವರೆ ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಮಾತ್ರವಲ್ಲದೆ, ಶಿಕ್ಷಕರು, ಅಕ್ಷರದಾಸೋಹ ಸಿಬ್ಬಂದಿ ಎಲ್ಲರೂ ಸ್ವ ಪ್ರೇರಣೆಯಿಂದ ಸಮವಸ್ತ್ರ ಧರಿಸಿಕೊಂಡೇ ಕಾರ್ಯ ನಿರ್ವಹಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

Uniform For Teachers In Gundlupet Govt School

ಶಾಲೆ ಎಂಬುದು ವಿದ್ಯಾದೇಗುಲ ಇಲ್ಲಿ ಜಾತಿ, ಧರ್ಮ, ಮೇಲು ಕೀಳು, ಬಡವ ಬಲ್ಲಿದ ಹೀಗೆ ಯಾವುದೇ ರೀತಿಯ ಮನೋಭಾವ ಬಾರದೆ ಎಲ್ಲರೂ ಒಟ್ಟಾಗಿ ನಾವೆಲ್ಲರೂ ಒಂದೇ ಎಂಬುದು ಎಲ್ಲರ ಮನದಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಅಷ್ಟೇ ಅಲ್ಲದೆ ಎಸ್ ಡಿಎಂಸಿ ಸದಸ್ಯರು ಧರಿಸುತ್ತಿರುವುದು ಈ ಶಾಲೆಯ ವಿಶೇಷತೆಯಾಗಿದೆ.

ಹಾಗೆ ನೋಡಿದರೆ ಹೊಂಗಹಳ್ಳಿ ಸರ್ಕಾರಿ ಶಾಲೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳಿದ್ದು ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಅವರ ಪ್ರಯತ್ನದ ಫಲದಿಂದಲೇ ಇದೆಲ್ಲ ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಸಹಸ್ರಾರು ಸರ್ಕಾರಿ ಶಾಲೆಗಳಿವೆ. ಅವುಗಳ ನಡುವೆ ತಮ್ಮೂರಿನ ಶಾಲೆಯು ಪಾಠ ಪ್ರವಚನ ಮಾತ್ರವಲ್ಲದೆ, ಅಭಿವೃದ್ಧಿ, ಶಿಸ್ತು, ಸಮಾನತೆ ಇನ್ನಿತರ ಚಟುವಟಿಕೆಯೊಂದಿಗೆ ವೈಶಿಷ್ಟ್ಯಪೂರ್ಣವಾಗಿರಬೇಕೆಂಬ ಉದ್ದೇಶವೇ ಇವತ್ತು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

Uniform For Teachers In Gundlupet Govt School

ಸಮವಸ್ತ್ರದಲ್ಲಿದೆ ಶಿಷ್ಟಾಚಾರ; ಹಾಗಾದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇರುವ ಸಮವಸ್ತ್ರಗಳು ಯಾವುದು ಮತ್ತು ಯಾವಾಗ ಧರಿಸುತ್ತಾರೆ? ಎಂಬಿತ್ಯಾದಿ ವಿವರಗಳನ್ನು ನೋಡಿದ್ದೇ ಆದರೆ ಒಂದಷ್ಟು ಕುತೂಹಲಕಾರಿ ವಿಚಾರಗಳು ಸಮವಸ್ತ್ರ ಮತ್ತು ಅದನ್ನು ಧರಿಸುವುದರಲ್ಲಿ ಇರುವ ಶಿಸ್ತು ಎದ್ದು ಕಾಣಿಸುತ್ತಿದೆ.

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಸಮವಸ್ತ್ರವಿದ್ದರೆ, ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕ ವರ್ಗಕ್ಕೆ ದಿನ ಬಿಟ್ಟು ದಿನದಂತೆ ಮೂರು ಮತ್ತು‌ ಎಸ್ಡಿಎಂಸಿ ಸದಸ್ಯರಿಗೆ ಎರಡು ಸಮವಸ್ತ್ರಗಳಿವೆ. ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಣ್ಣದ ಸಮವಸ್ತ್ರವಿದ್ದು, ಶನಿವಾರ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಬಿಳಿ ಬಣ್ಣದ ಸಮವಸ್ತ್ರದೊಂದಿಗೆ ಗಾಂಧಿ ಟೋಪಿ ಧರಿಸುತ್ತಾರೆ.

ಇನ್ನು ಶಿಕ್ಷಕರ ಸಮವಸ್ತ್ರವು ಆಕಾಶ ನೀಲಿ, ಬೂದು ಮತ್ತು ಎಣ್ಣೆಗೆಂಪು ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಆಗಿದ್ದರೆ, ಶಿಕ್ಷಕಿಯರು ಎಣ್ಣೆಗೆಂಪು, ಆಕಾಶನೀಲಿ ಮತ್ತು ಹಸಿರು ಬಣ್ಣದ ಸೀರೆ ಉಡಲಿದ್ದಾರೆ.‌ ಬಿಸಿಯೂಟದ ಸಿಬ್ಬಂದಿಗೂ ಮೂರು ಸಮವಸ್ತ್ರವಿದ್ದು ಕೆಂಪು, ನೀಲಿ ಮತ್ತು ಕ್ರೀಂ ಬಣ್ಣದ ಸೀರೆ ಇರಲಿದೆ. ಎಸ್‌ಡಿಎಂಸಿ ಸದಸ್ಯರಿಗೆ ಬಿಳಿ ಪಂಚೆ ಶರ್ಟ್ ಜೊತೆ ಎರಡು ಬಣ್ಣದ ಟವೆಲ್ ಇದೆ. ಸದಸ್ಯರು ಶಾಲೆಗೆ ಆಗಮಿಸುವ ವೇಳೆ ತಮ್ಮ ಪ್ರಾಥಮಿಕ‌ ಮಾಹಿತಿಯುಳ್ಳ ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳುತ್ತಾರೆ.

ಕೆಲಸಕ್ಕೆ ಕೈಜೋಡಿಸುವ ಶಿಕ್ಷಕರು; ಇಷ್ಟೇ ಅಲ್ಲದೆ ಶಾಲೆಯ ಅಭಿವೃದ್ಧಿಗೆ ಒತ್ತು ನೀಡುವ ಶಿಕ್ಷಕರು ಮತ್ತು ಎಸ್‌ಡಿಎಂಸಿಯವರು ರಜಾ ದಿನಗಳಲ್ಲಿ ಶಾಲೆಗೆ ಆಗಮಿಸಿ ಅಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸುವ ಮೂಲಕ ಗುಣಮಟ್ಟದ ಕೆಲಸಕ್ಕೆ ಮುಂದಾಗುತ್ತಾರೆ. ಈಗಾಗಲೇ ರಜಾ ದಿನಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಸೇರಿಕೊಂಡು ಕಾಂಪೌಂಡ್, ಶೌಚಾಲಯ ಕಟ್ಟಡಗಳನ್ನು ನಿರ್ಮಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಕ ಮಹದೇಶ್ವರಸ್ವಾಮಿ ನಿತ್ಯ 40 ಕಿ. ಮೀ. ಸಂಚರಿಸಿ ಶಾಲೆಯ ಗಿಡಗಳಿಗೆ ನೀರುಣಿಸಿ ಮಕ್ಕಳು ಬೆಳೆಸಿದ ಗಿಡ, ಪರಿಸರ ಹಾಳಗಾದಂತೆ ನೋಡಿಕೊಂಡಿರುವುದು ಅವರಿಗೆ ಶಾಲೆ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಅವರ ಕಾರ್ಯವನ್ನು ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಶ್ಲಾಘಿಸಿದ್ದರು.

ಪರಿಸರಕ್ಕೆ ಕೊಡುಗೆ ನೀಡಿದ ಶಾಲೆ; ಶಾಲೆಯಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದ ಕಾಳಜಿ ಮೆರೆದಿರುವುದಲ್ಲದೆ, ಅವುಗಳ ಹುಟ್ಟು ಹಬ್ಬ ಮಾಡಿ ಸಂಭ್ರಮಿಸುತ್ತಾರೆ. ಪ್ರತಿ ವರ್ಷ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸದಂತೆ ಪ್ರಮಾಣ ಮಾಡಿ ಪರಿಸರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಪಾಠ ಪ್ರವಚನದೊಂದಿಗೆ ಇತರೆ ಸಾಮಾಜಿಕ ಕಳಕಳಿ ಅರಿವು ಮೂಡಿಸುತ್ತಿರುವುದು ವಿಶೇಷವಾಗಿದೆ.

ಎಸ್ ಡಿಎಂಸಿ ಮತ್ತು ಶಿಕ್ಷಕರು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಯಾವುದೂ ಕಷ್ಟವಲ್ಲ, ಜತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂಬುದಕ್ಕೆ ಹೊಂಗಳ್ಳಿ ಸರ್ಕಾರಿ ಉದಾಹರಣೆಯಾಗಿದೆ. ಪರಸ್ಪರ ಸಹಕಾರದಿಂದಲೇ ಸಮವಸ್ತ್ರಕ್ಕೆ ಗೌರವ ನೀಡಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಶಿಕ್ಷಕೇತರರು ಸಮವಸ್ತ್ರ ಧರಿಸಿ, ಆ ಮೂಲಕ ನಾವೆಲ್ಲರೂ ಸಮಾನರು ಎಂಬ ಸಂದೇಶವನ್ನು ರವಾನಿಸಿರುವುದು ಖುಷಿ ಪಡುವ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+