ಚಾಮರಾಜನಗರ: ಸ್ವಾಂತತ್ರ್ಯ ದಿನಾಚರಣೆಯಂದೇ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಮುಂದಾದ ರೈತರು-ಮುಂದೇನಾಯ್ತು?
ಚಾಮರಾಜನಗರ, ಆಗಸ್ಟ್, 15: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು (ಆಗಸ್ಟ್ 15) ಸ್ವಾಂತತ್ರ್ಯ ದಿನಾಚರಣೆಯಂದೇ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಮುಂದಾದ ರೈತರನ್ನು ಚಾಮರಾಜನಗರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಹಾಗಾದರೆ ರ‍್ಯಾಲಿ ಯಾರ ನೇತೃತ್ವದಲ್ಲಿ ನಡೆಯಿತು? ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ಮಹಾದೇವಸ್ವಾಮಿ ನೇತೃತ್ವದಲ್ಲಿ ಇಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಚಾಮರಾಜನಗರ ಪ್ರವಾಸಿ ಮಂದಿರದಿಂದ ರ‍್ಯಾಲಿ ಆರಂಭ ಆಗುತ್ತಿದ್ದಂತೆ ಅನುಮತಿ ನಿರಾಕರಣೆ ಕಾರಣದಿಂದ 25ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘವು ಟ್ರ್ಯಾಕ್ಟರ್ ರ‍್ಯಾಲಿಯನ್ನು ಪ್ರವಾಸಿ ಮಂದಿರದ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಸಲು ತೀರ್ಮಾನ ಮಾಡಲಾಗಿತ್ತು.
ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಮಾಡಬೇಕು. ಕೃಷಿ ಬಳಕೆಗೆ ಮಾಡುವ ಟ್ಯಾಕ್ಟರ್ ಉಪಕರಣಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿ ಆಗಬೇಕು, ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಈ ರ‍್ಯಾಲಿ ನಡೆಯುತ್ತಿತ್ತು.
ದೇಶಭಕ್ತಿ ಎಂಬುದು ಮಾತೃಪ್ರೇಮದಂತೆ ಸಹಜ ಸ್ವಭಾವ: ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಂಭ್ರಮ- ಸಡಗರದಿಂದ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸರ ವಿವಿಧ ತುಕಡಿ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಧ್ವಜಾರೋಹಣ ಬಳಿಕ ಕೆ.ವೆಂಕಟೇಶ್ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿ, ಲಕ್ಷಂತಾರ ಮಂದಿ ದೇಶಭಕ್ತರ ತ್ಯಾಗ, ಬಲಿದಾನ ಸಮರ್ಪಣೆ ಮೂಲಕ ದೊರೆತ ಸ್ವಾತಂತ್ರ್ಯಕ್ಕೆ 78ರ ಸಂಭ್ರಮ, ನಮಗೆ ಭಾರತ ಒಂದು ಮಾತೃಭೂಮಿ, ಭಾವನಾತ್ಮಕ ಬೆಸುಗೆಯಿಂದ ಬೆಳೆದ ನಮಗೆ ದೇಶಭಕ್ತಿ ಎನ್ನುವುದು ಮಾತೃಪ್ರೇಮದಂತೆ ಹುಟ್ಟಿನಿಂದಲೂ ಬೆಳೆದು ಬಂದ ಸಹಜ ಸ್ವಭಾವ ಎಂದರು.
ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವುದರ ಜೊತೆ-ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಇರುವ ವಿಫುಲ ಅವಕಾಶ ಬಳಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಯತ್ತ ವಿಶೇಷ ಗಮನಹರಿಸಬೇಕಾಗಿದೆ ಎಂದುರು.
ಚಾಮರಾಜನಗರ ಜಿಲ್ಲೆಯಲ್ಲಿ 8,10,807 ಮಂದಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಡಿಬಿಟಿ ಸದುಪಯೋಗ ಪಡೆಯುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಚಾಮರಾಜನಗರ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ. ಗೃಹಜ್ಯೋತಿ ಯೋಜನೆಯಲ್ಲಿ ಶೇಕಡ 99.53ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಿದರು.
ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ, ದಿವ್ಯತೆ, ಭವ್ಯತೆಗಳ ಅರಿವಿನಿಂದ ನಮ್ಮ ಯುವ ಪೀಳಿಗೆ ಜಾಗೃತಗೊಳ್ಳಲಿ, ವಂದೇ ಭಾರತ-ಒಂದೇ ಭಾರತ ಎಂಬ ಕೂಗು ಒಮ್ಮೆಗೆ ಮೊಳಗಲಿ ಎಂದರು. ಕಾರ್ಯಕ್ರಮದಲ್ಲಿ ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಇತರೆ ಗಣ್ಯರು ಇದ್ದರು.












Click it and Unblock the Notifications