ಬಂಡೀಪುರ ಅರಣ್ಯದಲ್ಲಿ ಕಾದಾಡಿ ಸತ್ತ ಹುಲಿ?
ಚಾಮರಾಜನಗರ, ಜೂನ್ 21: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಹುಲಿಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕಕಾರಿಯಾಗಿದೆ.
ಮೇ ತಿಂಗಳ ಕೊನೆಯ ವಾರದಲ್ಲಿ ಬಂಡೀಪುರ ವ್ಯಾಪ್ತಿಯಲ್ಲಿ ಹುಲಿ, ಚಿರತೆಗಳು ಸಾವನ್ನಪ್ಪಿದ್ದವು. ಇದೀಗ ಮೂಲೆಹೊಳೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಸುಮಾರು ಏಳು ವರ್ಷ ಪ್ರಾಯದ ಗಂಡು ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಹುಲಿ ಕಾದಾಟದಲ್ಲಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಬಂಡೀಪುರ ಮೂಲೆಹೊಳೆ ಅರಣ್ಯ ವಲಯ ವ್ಯಾಪ್ತಿಯ ಚಿಕ್ಕನಹಳ್ಳ ಪ್ರದೇಶದಲ್ಲಿ ಹುಲಿಯ ಮೃತದೇಹ ಕಂಡು ಬಂದಿದ್ದು, ಇದನ್ನು ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನೋಡಿ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸಿಎಫ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಅವರು ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಮಾದರಿಯನ್ನು ಸಂಗ್ರಹಿಸಿದ ನಂತರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.
ಮೃತ ಹುಲಿಯ ದೇಹದ ಮೇಲೆ ಗಾಯದ ಗುರುತುಗಳಿರುವ ಹಿನ್ನೆಲೆಯಲ್ಲಿ ಇನ್ನೊಂದು ಬಲಿಷ್ಠ ಹುಲಿಯೊಂದಿಗೆ ಕಾದಾಟ ಮಾಡಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.












Click it and Unblock the Notifications