ವನ್ಯ ಜೀವಿಗಳಿಗೆ ಕಾಡಿನಲ್ಲಿ ಆಹಾರ ಬೆಳೆಸಲು ಮುಂದಾದ ಅರಣ್ಯ ಇಲಾಖೆ
ಚಾಮರಾಜನಗರ, ಜೂನ್ 26: ಕಾಡಿನಲ್ಲಿ ವ್ಯಾಪಕವಾಗಿ ಬೆಳೆದುಕೊಂಡಿರುವ ನಿರುಪಯುಕ್ತ ಲಂಟಾನ ಕಳೆಗಿಡಗಳನ್ನು ಸ್ವಚ್ಚಗೊಳಿಸಿ ಅಲ್ಲಿ ಪ್ರಾಣಿಗಳಿಗೆ ಉಪಯುಕ್ತವಾಗುವ ಹುಲ್ಲು ಮತ್ತು ಬಿದಿರನ್ನು ಬೆಳೆಸಲು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಇದಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯನ್ನು ಬಳಸಲಾಗುತ್ತಿದೆ. ಈ ಮೊದಲೆಲ್ಲ ಅರಣ್ಯ ಇಲಾಖೆಯೇ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಳೆ ತೆಗೆಯುತಿತ್ತು. ಇದೀಗ ಮೊದಲ ಬಾರಿಗೆ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನರೇಗಾ ಯೋಜನೆಯಲ್ಲಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.
ಬಿಆರ್‌ಟಿ ವ್ಯಾಪ್ತಿಯ ಐದೂ ವಲಯಗಳಲ್ಲಿ ತಲಾ 50 ಹೆಕ್ಟೇರ್ ಪ್ರದೇಶಗಳಲ್ಲಿ ಹರಡಿರುವ ಲಾಂಟಾನವನ್ನು ನರೇಗಾ ಕೂಲಿ ಕಾರ್ಮಿಕರು ತೆರವುಗೊಳಿಸಲಿದ್ದಾರೆ. ಲಾಂಟಾನ ತೆರವುಗೊಳಿಸಿದ ಸ್ಥಳದಲ್ಲಿ ಹುಲ್ಲು ಹಾಗೂ ಬಿದಿರು ಬೆಳೆಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

ಪ್ರಾಣಿಗಳು ಹಾಗೂ ಗಿಡ ಮರಗಳಿಗೆ ಶಾಪವಾಗಿ ಪರಿಣಮಿಸಿರುವ ಲಾಂಟಾನ ಕಳೆಗಿಡ ಬಿಆರ್‌ಟಿ ಅರಣ್ಯದ ಶೇ.60ರಿಂದ 70ರಷ್ಟು ಪ್ರದೇಶವನ್ನು ವ್ಯಾಪಿಸಿದೆ. ಈ ಕಳೆಗಿಡವು ರಾಕ್ಷಸನಾಗಿ ಇಡೀ ಅರಣ್ಯವನ್ನು ಆವರಿಸಿಕೊಳ್ಳುವ ಕಾರಣದಿಂದ ಇಲ್ಲಿ ಹುಲ್ಲು ಕೂಡಾ ಬೆಳೆಯುವುದಿಲ್ಲ. ಇದಲ್ಲದೆ ಆನೆ, ಜಿಂಕೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವೂ ಸಿಗದಂತಾಗುತ್ತದೆ.
ಲಂಟಾನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅರಣ್ಯ ಇಲಾಖೆಯ ಪ್ರಯತ್ನವು ಫಲ ನೀಡಿಲ್ಲ, ಏಕೆಂದರೆ ಸಾವಿರಾರು ಹೆಕ್ಟೇರ್ ಅರಣ್ಯವನ್ನು ಸ್ವಚ್ಚಗೊಳಿಸಲು ಕೋಟ್ಯಂತರ ರೂಪಾಯಿ ಅನುದಾನ ಬೇಕಾಗುತ್ತದೆ. ಆದರೆ ಅರಣ್ಯ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ನರೇಗಾ ಅಡಿಯಲ್ಲಿ ಸೋಲಿಗರು ಹಾಗೂ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಲಾಂಟಾನ ತೆರವುಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಐದು ವಲಯಗಳಲ್ಲಿ ಈ ಕಾರ್ಯ ನಡೆಯಲಿದ್ದು, ಸದ್ಯ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಬೀದಿಕೆರೆ, ಕೆಣ್‌ಕೆರೆ, ಸೋಮೇಶ್ವರ ಕೆರೆ, ಶೆಟ್ರಕಟ್ಟೆ ಪ್ರದೇಶದಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಉಳಿದ ಕಡೆಗಳಲ್ಲೂ ಶೀಘ್ರವಾಗಿ ಆರಂಭವಾಗಲಿದೆ.
ಐದು ವಲಯಗಳ ತಲಾ 50 ಹೆಕ್ಟೇರ್ ಪ್ರದೇಶದಲ್ಲಿ ಲಂಟಾನ ಗಿಡಗಳನ್ನು ಕಾರ್ಮಿಕರು ಬೇರು ಸಹಿತ ಕಿತ್ತು ಹಾಕಲಿದ್ದು, ಈ ಪ್ರದೇಶದಲ್ಲಿ ಹುಲ್ಲುಗಾವಲು ನಿರ್ಮಾಣ ಹಾಗೂ ಬಿದಿರನ್ನು ಅರಣ್ಯ ಇಲಾಖೆ ಬೆಳೆಸಲಿದೆ.
ಈ ಕುರಿತು ಮಾತನಾಡಿದ ಬಿಆರ್‌ಟಿ ಡಿಸಿಎಫ್ ಡಾ.ಜಿ. ಸಂತೋಷ್‌ಕುಮಾರ್, "ಮೊದಲ ಹಂತದಲ್ಲಿ ಕಳೆಗಳನ್ನು ತೆರವುಗೊಳಿಸಲಾಗುವುದು. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹುಲ್ಲು ಹಾಗೂ ಬಿದಿರಿನ ಬೀಜಗಳನ್ನು ಸಂಗ್ರಹಿಸಿ ಮುಂದಿನ ಮಳೆಗಾಲದ ಆರಂಭದಲ್ಲಿ ಬೀಜಗಳನ್ನು ನಾಟಿ ಮಾಡಲಾಗುವುದು,'' ಎಂದರು.
Recommended Video
ಕಾಡಂಚಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನಿತ್ಯವೂ ಕಾಡಾನೆಗಳು ದಾಂಗುಡಿ ಇಡುತ್ತಿದ್ದು, ರೈತರು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ಒಂದೇ ರಾತ್ರಿಯಲ್ಲಿ ನಾಶ ಪಡಿಸುತ್ತಿವೆ. ಈ ರೀತಿ ಹುಲ್ಲು ಹಾಗೂ ಬಿದಿರನ್ನು ಬೆಳೆಸುವುದರಿಂದ ಕಾಡಿನಲ್ಲಿ ಮೇವಿನ ಕೊರತೆಯಿಂದಾಗಿ ಊರಿನೊಳಗೆ ನುಗ್ಗುತ್ತಿರುವ ಕಾಡಾನೆಗಳ ಹಾವಳಿಯೂ ಕಡಿಮೆ ಆಗಲಿದೆ.












Click it and Unblock the Notifications