ಲೋಕಸಭಾ ಚುನಾವಣೆಯಲ್ಲಿ ಹೊಸ ಟಾಸ್ಕ್: ಗುಳೆಹೋಗಿರುವ ಮತದಾರರನ್ನು ಕರೆತರುವುದೇ ಸವಾಲ್
ಚಾಮರಾಜನಗರ, ಏಪ್ರಿಲ್ 04: ಈ ಬಾರಿಯ ಬರ ಕೂಲಿಯನ್ನೇ ನಂಬಿ ಬದುಕುತ್ತಿದ್ದ ಜಿಲ್ಲೆಯ ಬಡವರ್ಗದ ಜನರನ್ನು ಇನ್ನಿಲ್ಲದಂತೆ ಕಾಡಿದೆ. ಹೀಗಾಗಿಯೇ ಕೂಲಿ ಅರಸಿ ಆದಿವಾಸಿ ಕುಟುಂಬಗಳು ಮನೆಗೆ ಬೀಗ ಹಾಕಿ ಕೊಡಗು, ಹಾಸನದತ್ತ ಗುಳೆ ಹೋಗಿರುವುದರಿಂದ ಏ.26ರಂದು ನಡೆಯುತ್ತಿರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಗುಳೆಹೋಗಿರುವ ಮತದಾರರನ್ನು ಕರೆತಂದು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸ್ವೀಪ್ ಸಮಿತಿಗೆ ಸವಾಲ್ ಆಗಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ವೀಪ್ ಸಮಿತಿ ಮಾಡುತ್ತಿದೆ. ಈ ಸಮಿತಿಯ ಕಾರ್ಯಚಟುವಟಿಕೆ ಪರಿಣಾಮ ಮತದಾನದ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಜತೆಗೆ ಅರಣ್ಯದಂಚಿನಲ್ಲಿ ವಾಸ ಮಾಡುವ ಆದಿವಾಸಿ ಹಾಡಿಗಳಲ್ಲಿ ಮತದಾನದ ಜಾಗೃತಿಯನ್ನು ಹೆಚ್ಚೆಚ್ಚು ಮಾಡಲಾಗುತ್ತಿದ್ದು, ಅವರೆಲ್ಲರನ್ನು ಮತದಾನದ ದಿನ ಮತಕೇಂದ್ರಕ್ಕೆ ಬರುವಂತೆ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.

ಜಿಲ್ಲೆಯ ಬಹಳಷ್ಟು ಹಾಡಿಗಳಲ್ಲಿ ವಾಸ ಮಾಡುವವರು ಕೂಲಿ ಕೆಲಸವನ್ನೇ ನಂಬಿ ಜೀವನ ಮಾಡುತ್ತಾರೆ. ಈ ಬಾರಿ ಬರ ಕಾಣಿಸಿರುವುದರಿಂದ ಸ್ಥಳೀಯವಾಗಿ ಕೆಲಸ ಮಾಡಲು ಕೆಲಸವೇ ಇಲ್ಲದಾಗಿದೆ. ಹಾಗಾಗಿ ಕೆಲಸ ಹುಡುಕಿಕೊಂಡು ಜಿಲ್ಲೆಯನ್ನು ಬಿಟ್ಟು ಹೊರ ಹೋಗಿದ್ದಾರೆ. ಹೀಗೆ ಹೋದವರು ಚುನಾವಣೆ ಹೊತ್ತಿಗೆ ಹಿಂತಿರುಗುತ್ತಾರಾ ಎಂಬುದೇ ಪ್ರಶ್ನೆಯಾಗಿದೆ. ಸದ್ಯ ಚಾಮರಾಜನಗರ ತಾಲ್ಲೂಕಿನ ಹನೂರು ತಾಲೂಕಿನ ಗಡಿಯಂಚಿನ ಅರ್ಧನಾರಿಪುರ ಗ್ರಾಮದ ಸೋಲಿಗ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಅರಸಿ ಗುಳೆ ಹೋಗಿದ್ದಾರೆ.
ಅರ್ಧನಾರಿಪುರ ಗ್ರಾಮದಲ್ಲಿ ಸಂಕಷ್ಟದ ಜೀವನ
ಇನ್ನು ಅರ್ಧನಾರಿಪುರ ಗ್ರಾಮದ ಬಗ್ಗೆ ಹೇಳಬೇಕೆಂದರೆ, ಈ ಗ್ರಾಮ ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಗಡಿಯಂಚಿನ ಈ ಗ್ರಾಮವಾಗಿದೆ. ಇಲ್ಲಿ 70ಕ್ಕೂ ಹೆಚ್ಚು ಗಿರಿಜನ ಕುಟುಂಬಗಳಿದ್ದು, ಸುಮಾರು 500 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಬಹುತೇಕ ಜನರು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇಸಿಗೆಯ ಕಾಲವಾಗಿರುವುದರಿಂದ ಜತೆಗೆ ಬರಗಾಲವೂ ಕಾಡುತ್ತಿರುವುದರಿಂದ ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಇದರಿಂದ ಕೂಲಿ ಕೆಲಸವೂ ಇಲ್ಲದಾಗಿದೆ. ಇದರೊಂದಿಗೆ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಉದ್ಯೋಗವೂ ಸಿಗದಂತಾಗಿದೆ.
ಇಷ್ಟೇ ಅಲ್ಲದೆ ಗ್ರಾಮದಲ್ಲಿ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದು, ಇವರೆಲ್ಲರೂ ಗ್ರಾಮದಲ್ಲಿ ಹಲವು ಸಮಸ್ಯೆಯಿಂದ ಬಳಲುತ್ತಿದ್ದು ಅದರಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುಮುಖ್ಯವಾಗಿದೆ. ಒಂದೆಡೆ ಮೂಲ ಸೌಕರ್ಯಗಳ ಕೊರತೆ ಮತ್ತೊಂದೆಡೆ ಕೂಲಿ ಸಿಗದೆ ಹೊಟ್ಟೆ ಪಾಡು ಕಳೆಯುವ ಚಿಂತೆ. ಹೀಗಾಗಿಯೇ ಅವರೆಲ್ಲರೂ ಈ ಹಿಂದೆಯೇ ಕಾಫಿ ಕೊಯ್ಲುಗಾಗಿ ಕೊಡಗು ಹಾಗೂ ಹಾಸನದ ಕಡೆಗೆ ಹೋಗಿದ್ದಾರೆ. ಈಗಾಗಲೇ ಕಾಫಿ ಕೊಯ್ಲು ಆಗಿದ್ದು, ಕರಿಮೆಣಸು ಕೊಯ್ಲು ನಡೆಯುತ್ತಿದೆ. ಈ ಭಾಗದಲ್ಲಿ ವರ್ಷಪೂರ್ತಿ ಕೆಲಸವಿದ್ದು, ಅದರಲ್ಲೂ ಬೇಸಿಗೆ ಸಮಯದಲ್ಲಿ ಹಲವು ರೀತಿಯ ಕೆಲಸಗಳನ್ನು ಮಾಡಬಹುದಾಗಿದೆ.

ಬಹುತೇಕ ಮನೆಗಳಿಗೆ ಬೀಗ ಹಾಕಿದೆ
ಹಾಗೆನೋಡಿದರೆ ಕೊಡಗು ಹಾಗೂ ಹಾಸನ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆಯಿದ್ದು, ಅಲ್ಲಿ ಕೆಲಸಕ್ಕೆ ಯಾವುದೇ ತೊಂದರೆಯಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ಕೆಲಸ ಮಾಡಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಿಂತಿರುಗುವುದು ಮೊದಲಿನಿಂದಲೂ ನಡೆಯುತ್ತಿದ್ದು, ಅದರಂತೆ ಈ ಬಾರಿಯೂ ಜನ ವಲಸೆ ಹೋಗಿದ್ದಾರೆ. ಅವರನ್ನು ಮತದಾನಕ್ಕೆ ಕರೆತರುವ ಕೆಲಸ ಈಗ ಆಗಬೇಕಾಗಿದೆ.
ಇನ್ನೊಂದೆಡೆ ಗ್ರಾಮದ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೋಗಿದ್ದೇಕೆ ಎಂಬುದಕ್ಕೆ ಈ ಗ್ರಾಮದ ಜನರಿಗೆ ಕಳೆದ 2 ತಿಂಗಳ ಹಿಂದೆ ಗ್ರಾಪಂ ನರೇಗಾ ಯೋಜನೆಯಡಿ ಉದ್ಯೋಗ ನೀಡಿತ್ತು. ಆದರೆ ಬಹುತೇಕರಿಗೆ ಕೂಲಿ ಹಣ ನೀಡಿಲ್ಲ. ಜತೆಗೆ ಸಮರ್ಪಕವಾಗಿ ಉದ್ಯೋಗ ನೀಡುತ್ತಿಲ್ಲ. ಮನೆಯ ಸೌಲಭ್ಯವಿಲ್ಲದೆ ಪುಟ್ಟ ಮನೆಯಲ್ಲಿ 2 ರಿಂದ 3 ಕುಟುಂಬಗಳು ವಾಸ ಮಾಡುತ್ತಿವೆಯಂತೆ. ಇದೆಲ್ಲ ಸಮಸ್ಯೆಗಳಿಂದ ಗ್ರಾಮದಿಂದ ಬಹುತೇಕರು ಹೊರ ಹೋಗಿದ್ದು ವೃದ್ಧರು, ಮಕ್ಕಳು ಉಳಿದುಕೊಂಡಿದ್ದಾರೆ. ಬಹುತೇಕ ಮನೆಗಳಿಗೆ ಬೀಗ ಹಾಕಿರುವ ದೃಶ್ಯಗಳು ಎದುರಾಗಿವೆ.
ಗುಳೆ ಹೋದವರು ಮತದಾನಕ್ಕೆ ಬರುತ್ತಾರಾ?
ಇದು ಕೇವಲ ಅರ್ಧನಾರಿಪುರ ಗ್ರಾಮದ ಸಮಸ್ಯೆಯಲ್ಲ ಬಹುತೇಕ ಗ್ರಾಮಗಳಲ್ಲಿ ಇಂತಹದ್ದೇ ಸಮಸ್ಯೆಯಿದೆ. ಆದರೂ ಅವರೆಲ್ಲರೂ ಚುನಾವಣೆ ವೇಳೆಗೆ ಊರಿನತ್ತ ಹಿಂತಿರುಗುವ ಆಶಾಭಾವನೆಯಿದೆ. ಇದೆಲ್ಲದರ ನಡುವೆ ಸ್ವೀಪ್ ಸಮಿತಿ ಮತಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮುಂದುವರೆಸಿದೆ. ಸೋಲಿಗರ ಹಾಡಿಗಳಲ್ಲಿ ಗಿರಿಜನರಿಗೆ ಜಾಗೃತಿ ಮೂಡಿಸುವ ಸಂಬಂಧ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಮತಗಟ್ಟೆಗಳನ್ನು ಸಿಂಗರಿಸಿ ಮತದಾರರನ್ನು ಆಕರ್ಷಿಸುವಂತೆ ಮಾಡಲಾಗುತ್ತಿದೆ.

ಮತದಾರರು ಏಕೆ ಮತದಾನ ಮಾಡಬೇಕು ಎಂಬುದರ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ಇದೆಲ್ಲವೂ ಖುಷಿಯ ಸಂಗತಿಯಾದರೂ ಮುಂಬರುವ ಚುನಾವಣೆಯಲ್ಲಿ ಊರು ಬಿಟ್ಟು ಹೋದವರನ್ನು ಮರಳಿ ಕರೆತಂದು ಮತ ಚಲಾಯಿಸುವಂತೆ ಮಾಡುವುದು ಸವಾಲ್ ಆಗಿದೆ. ಅದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.'












Click it and Unblock the Notifications