ಇವರು ವಾರದಲ್ಲಿ 6 ದಿನ ಟೈಲರ್, ಒಂದಿನ ಪಕ್ಕಾ ಆಕ್ಟರ್!
ಚಾಮರಾಜನಗರ ಜುಲೈ, 24: ಹನೂರು ಪಟ್ಟಣದಲ್ಲಿರುವ ಚಂದ್ರಶೇಖರ್ ಅಲಿಯಾಸ್ ಚಂದ್ರು ಎಂಬುವರು 6 ದಿನ ಟೈಲರ್ ಕೆಲಸವನ್ನು ಮಾಡುತ್ತಾರೆ. ಇವರು ಡಾ. ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದು, ವಾರದಲ್ಲಿ ಒಂದು ದಿನ ಅಂದರೆ ಭಾನುವಾರ ನಟನೆಗೆ ಮಾಡುತ್ತಾರೆ.
ಕಲೆ, ನಟನೆಗೆ ವಯಸ್ಸು, ಪ್ರದೇಶ, ನೌಕರಿಯ ಯಾವುದೇ ಹಂಗಿಲ್ಲ ಎಂಬುದಕ್ಕೆ ಈ ವ್ಯಕ್ತಿ ಓರ್ವ ಉದಾಹರಣೆ. ವಾರದಲ್ಲಿ 6 ದಿನ ಕೆಲಸ ಮಾಡುವ ಇವರು ಒಂದು ದಿನವನ್ನು ನಟನೆಗೆ ಮೀಸಲಿಡುತ್ತಿದ್ದಾರೆ.
ಚಂದ್ರು ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿಯೂ ಆಗಿದ್ದಾರೆ. ಭಾನುವಾರ ಬಂತೆಂದರೆ ಸಾಕು ನಟನೆಗೆ ಇಳಿದು ಬಿಡುತ್ತಾರೆ. ಭಾನುವಾರ ಬರುವಿಕೆಯನ್ನು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಇವರು ಅಣ್ಣಾವ್ರ ರೀತಿ ನಟನೆ ಮಾಡುತ್ತಾ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೂ 650ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದು, ಆ ಎಲ್ಲಾ ವಿಡಿಯೋಗಳು ಅಣ್ಣಾವ್ರದ್ದೇ ಎಂಬುದು ವಿಶೇಷವಾಗಿದೆ.

ಸಾಧನೆಯ ಹಾದಿಗೆ ಕುಟುಂಬಸ್ಥರ ಸಾಥ್; ಟಿಕ್ ಟಾಕ್, ಯೂಟ್ಯೂಬ್‌ಗಳಲ್ಲಿ ಕಿರು ಚಿತ್ರಗಳನ್ನು ವೀಕ್ಷಿಸಿ ಪ್ರೇರಣೆಗೊಂಡ ಚಂದ್ರು ರಾಜ್‌ಕುಮಾರ್ ಅಭಿನಯದ ಹಾಡುಗಳು, ಡೈಲಾಗ್‌ಗಳನ್ನು ಕಂಠಪಾಠ ಮಾಡಿಕೊಂಡಿದ್ದಾರೆ. ಇವರ ಒಂದು ಅದ್ಭುತ ಕಲೆಗೆ ಸಂಬಂಧಿಕರು, ಹಾಗೂ ಮಕ್ಕಳು ಸಾಥ್ ಕೊಡುತ್ತಿದ್ದು, ಪತ್ನಿ ಅನಿತಾ ಕೂಡ ಸಾಥ್ ನೀಡುತ್ತಿದ್ದಾರೆ. ಭಾನುವಾರ ಸಾಮಾನ್ಯವಾಗಿ ಎಲ್ಲರ ಚಿತ್ತ ಬಾಡೂಟ, ಪಾರ್ಟಿಗಳ ಕಡೆಗೆ ಇರುತ್ತದೆ. ಆದರೆ ಚಂದ್ರು ಮಾತ್ರ ಭಾನುವಾರ ಬಂತೆಂದರೆ ಸಾಕು ಯಾವ ಹಾಡಿಗೆ ನಟನೆ ಮಾಡೋದು ಎಂಬ ಗುಂಗಿನಲ್ಲಿರುತ್ತಾರೆ.
ಚಂದ್ರು ಬಳಸುತ್ತಿದ್ದ ಕಾಸ್ಟೂಮ್ಸ್; ಸಾಮಾನ್ಯವಾಗಿ ಯೂಟ್ಯೂಬ್‌ಗಳಲ್ಲಿ ಕಿರುಚಿತ್ರಗಳು, ಇನ್‌ಸ್ಟಾ ರೀಲ್ಸ್ ಮಾಡೋರು ಸಹಜವಾಗಿ ಅಭಿನಯ ಮಾಡಿದರೇ, ಚಂದ್ರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಕಾಸ್ಟ್ಯೂಮ್ಸ್ ಹಾಕಿಕೊಂಡು ನಟನೆ ಮಾಡುತ್ತಾರೆ.

ಅಲ್ಲದೆ ಅಣ್ಣಾವ್ರ ಯೂನಿಕ್ ಮೀಸೆಯಲ್ಲಿ ವಾರಕ್ಕೊಮ್ಮೆ ಮಿಂಚುತ್ತಾರೆ. ಕವಿರತ್ನ ಕಾಳಿದಾಸದ ಕುರಿಗಾಹಿ, ಬಂಗಾರದ ಪಂಜರದ ಮುಗ್ಧ ಹಳ್ಳಿ ಹುಡುಗ, ಪ್ರೊಫೆಸರ್, ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಹೀಗೆ ನಾನಾ ಬಗೆಯ ಅವತಾರದಲ್ಲಿ ಬೆಟ್ಟ, ಗುಡ್ಡ, ನೀರಿನ ಝರಿ ಸುಂದರ ಪ್ರಕೃತಿ ನಡುವೆ ವಿಡಿಯೋ ಮಾಡಿ ನೆಟ್ಟಿಗರರನ್ನು ತನ್ನತ್ತ ಸೆಳೆದಿದ್ದಾರೆ. ಅಗಾಗ್ಗೆ ಇವರ ವಿಡಿಯೋಗಳು ವೈರಲ್ ಆಗುತ್ತಿದ್ದು, ಸರದಿಯಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ತಮ್ಮ ರೀಲ್ಸ್ ಕುರಿತು ಚಂದ್ರು ಮಾತನಾಡಿ, "ಬೇರೆಯವರು ಮಾಡಿದ ವಿಡಿಯೋ ನೋಡಿ ನಾನು ಏಕೆ ಅಣ್ಣಾವ್ರ ರೀತಿ ನಟನೆ ಮಾಡಬಾರದು ಎಂದು ಹಠ ಹಿಡಿದು ಇದನ್ನು ಪ್ರಾರಂಭಿಸಿದೆ. ಪತ್ನಿಯೂ ಕೂಡ ಸಾಥ್ ನೀಡುತ್ತಿದ್ದು, ನನಗೆ ತುಂಬಾ ಸಂತೋಷವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದರಿಂದ ನನ್ನ ಕಲೆಗೆ ಸಾಕಷ್ಟು ಅಭಿಮಾನಿಗಳು ಮನ ಸೋತಿದ್ದಾರೆ. ಭಾನುವಾರ ಬಂತೆಂದರೆ ಸಾಕು ಕಾಸ್ಟ್ಯೂಮ್ಸ್ ತೆಗೆದುಕೊಂಡು ಬೆಟ್ಟ, ಝರಿ ಪ್ರದೇಶಗಳಿಗೆ ಹೊರಟು ಬಿಡುತ್ತೇನೆ" ಎಂದರು.

ಒಟ್ಟಿನಲ್ಲಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಅಭಿನಯಕ್ಕೆ ಹಾತೊರೆಯುವವರಿಗೆ ವೇದಿಕೆ ಸಿಗುತ್ತಿದೆ ಅನ್ನುವುದಕ್ಕೆ ಚಂದ್ರು ಸಾಧನೆ ಸಾಕ್ಷಿಯಾಗಿದೆ. ಸಿಕ್ಕ ಅವಕಾಶವನ್ನು ಕೆಲವರು ಸರಿಯಾಗಿ ಬಳಸಿಕೊಂಡು ಎಂತಹ ಬೆಟ್ಟಗಳಂತಹ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದಕ್ಕೆ ಚಂದ್ರುವಿನ ಕಲೆ ಮುಖ್ಯ ಉದಾಹರಣೆಯಾಗಿದೆ.












Click it and Unblock the Notifications