ಸುಳ್ವಾಡಿ ವಿಷ ಪ್ರಸಾದ ಪ್ರಕರಣ; ಸ್ವಾಮೀಜಿಗೆ ಸದ್ಯಕ್ಕಿಲ್ಲ ರಿಲೀಫ್
ಚಾಮರಾಜನಗರ, ಡಿಸೆಂಬರ್ 2: ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಸೋಮವಾರ ವಜಾ ಮಾಡಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ. ಎನ್.ವಿ ರಮಣ. ನ್ಯಾ. ಅಜಯ್ ರಸ್ಟೋಗಿ ಹಾಗೂ ನ್ಯಾ.ವಿ.ರಾಮಸುಬ್ರಮಣ್ಯ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತ್ತು. ಇಮ್ಮಡಿ ಮಹದೇವಸ್ವಾಮಿ ಪರವಾಗಿ ವಕೀಲ ಸಂಸ್ಥೆ ದುವಾ ಅಸೋಸಿಯೇಟ್ ವಾದ ಮಂಡನೆ ಮಾಡಿದ್ದರು.
ಚಾಮರಾಜನಗರ ಸ್ಥಳೀಯ ಕೋರ್ಟ್, ರಾಜ್ಯ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲರಿದ್ದ ಇಮ್ಮಡಿ ಮಹದೇವಸ್ವಾಮಿ ಕಳೆದ ನವೆಂಬರ್ 21ರಂದು ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ 90 ದಿನಗಳ ತನಿಖೆ ನಡೆಸಿದ ತನಿಖಾಧಿಕಾರಿ ಡಿವೈಎಸ್ಪಿ ಪುಟ್ಟಮಾದಯ್ಯ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧದ ದ್ವೇಷದ ಹಿನ್ನೆಲೆ ಇಮ್ಮಡಿ ಮಹದೇವ ಸ್ವಾಮೀಜಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ಸಹಾಯದಿಂದ ಪ್ರಸಾದಕ್ಕೆ ವಿಷ ಹಾಕಿದ್ದರು. ಈ ವಿಷ ಪ್ರಸಾದ ಸೇವಿಸಿ 17 ಜನರು ಸಾವನ್ನಪ್ಪಿದ್ದರು. ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ಸದ್ಯಕ್ಕೆ ಜೈಲೇ ಗತಿಯಾಗಿದೆ.












Click it and Unblock the Notifications