ಚಾಮರಾಜನಗರದಲ್ಲಿ ಪತ್ತೆಯಾದ ಜೈನ ಶಾಸನದ ವಿಶೇಷತೆ ಗೊತ್ತಾ?
ಚಾಮರಾಜನಗರ, ಫೆಬ್ರವರಿ 03: ಇತಿಹಾಸಕ್ಕೆ ಸಂಬಂಧಿಸಿದ ಹತ್ತು ಹಲವು ಶಾಸನಗಳು ನಮ್ಮ ಸುತ್ತಮುತ್ತಲೇ ಇದ್ದರೂ ಅವು ಗಮನಕ್ಕೆ ಬಾರದೆ ಹೋಗಿರುತ್ತವೆ. ಅವುಗಳ ಬಗ್ಗೆ ಅನ್ವೇಷಣೆ ಮಾಡಿದಾಗ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸುವ ಮೂಲಕ ಇತಿಹಾಸದ ಕಥೆ ಹೇಳುತ್ತವೆ. ಇದೀಗ ಚಾಮರಾಜನಗರದ ವಿಜಯಪಾರ್ಶ್ವನಾಥ ಬಸದಿಯ ಆವರಣದಲ್ಲಿ ಜೈನಧರ್ಮಕ್ಕೆ ಸೇರಿದ ಒಂದು ನಿಶಧಿ ಶಾಸನ ಪತ್ತೆಯಾಗಿದ್ದು ಇದು ನಮ್ಮೆಲ್ಲರನ್ನು 11ನೇ ಶತಮಾನದ ಕಾಲಘಟ್ಟಕ್ಕೆ ಕೊಂಡೊಯ್ದು ಅವತ್ತಿನ ವಿಶೇಷತೆಗಳನ್ನು ತೆರೆದಿಡುತ್ತಿದೆ.
ಇದನ್ನು ಪತ್ತೆ ಮಾಡುವಲ್ಲಿ ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಪಿ.ನಿತಿನ್ ಅವರ ಶ್ರಮವಿದ್ದು ಇತ್ತೀಚೆಗೆ ಕೈಗೊಂಡ ಕ್ಷೇತ್ರ ಕಾರ್ಯದ ಸಮಯದಲ್ಲಿ ಪತ್ತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಶಾಸನ ವಿಜಯಪಾರ್ಶ್ವನಾಥ ಬಸದಿಯ ಆವರಣದಲ್ಲಿ ಬಸದಿಯ ಮುಂಭಾಗದ ಎಡಬದಿಯಲ್ಲಿ ತೀರ್ಥಂಕರರ ಶಿಲ್ಪವಿರುವ ಶಾಸನದ ಬಳಿಯೇ ಇದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಪರಿಶೀಲನೆ ನಡೆಸಿದಾಗ ಈ ನಿಶಧಿ ಶಾಸನವು ಪತ್ತೆಯಾಗಿದೆ.

ಶಾಸನವನ್ನು ಪತ್ತೆಹಚ್ಚುವಲ್ಲಿ ಶ್ರಮವಹಿಸಿರುವ ನಿತಿನ್ ಅವರ ಬಗ್ಗೆ ಹೇಳಲೇ ಬೇಕಾಗುತ್ತದೆ. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 18ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ವೆಬ್ ಸೈಟ್ ಅನ್ನು 2002ರಲ್ಲಿ ಸ್ಥಾಪಿಸಿ ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ಕರ್ನಾಟಕದ ಜೈನಪರಂಪರೆಗೆ ಸಂಬಂಧಿಸಿದಂತೆ "ಜಿನಯಾತ್ರಾ" ಎಂಬ ಪ್ರಶಸ್ತಿ ವಿಜೇತ ಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ.
ನಿಶದಿ ಶಾಸನದಲ್ಲಿ ವಿಶೇಷತೆ ಏನಿದೆ?
ಇನ್ನು ಶಾಸನದ ಬಗ್ಗೆ ನೋಡುತ್ತಾ ಹೋದರೆ ಇದರಲ್ಲಿ ಹತ್ತು ಹಲವು ವಿಶೇಷತೆಗಳಿರುವುದು ಗೋಚರಿಸುತ್ತದೆ. ಅದು ಏನೆಂದರೆ ಹದಿನಾಲ್ಕು ಸಾಲುಗಳಿರುವ ಈ ಶಾಸನದಲ್ಲಿ "ಕೊಂಡ ಕುಂದಾನ್ವಯ ದೇಸಿಗ ಗಣಕ್ಕೆ ಸೇರಿ ಸೂರ್ಯಚಂದ್ರರಿರುವವರೆಗೆ ಪ್ರಖ್ಯಾತರಾಗಿದ್ದು ಪನಸೋಗೆಯಲ್ಲಿ ವಾಸವಿದ್ದ ಗಣಪ್ರವರ್ತಕರಾದ ಶ್ರೀ ಧರದೇವರಶಿಷ್ಯ ಮುಡಿಪಿದರು. ಅವರ ಅಭಿಮಾನಿಯು ನಿಸಿಧಿಗೆಯನ್ನು ನಿರ್ಮಿಸಿದರು ಎಂದು ಬರೆಯಲಾಗಿದೆ.

ಹದಿನಾಲ್ಕು ಸಾಲುಗಳಿರುವ ಈ ಶಾಸನದ ಮೇಲ್ಭಾದಲ್ಲಿ ಎರಡು ಸಾಲುಗಳು, ನಂತರ ಪರ್ಯಂಕಾಸನದಲ್ಲಿರುವ ತೀರ್ಥಂಕರರ ಶಿಲ್ಪ, ನಂತರದ ಹನ್ನೆರಡು ಸಾಲುಗಳನ್ನು ಕಾಣಬಹುದು. ಶಾಸನವು ಕಂಬ ರೂಪದಲ್ಲಿ ಇರುವುದರಿಂದ ಇದು ಕಂಬನಿಶದಿ ಎಂದು ಕರೆಯಲಾಗುತ್ತದೆಯಂತೆ. ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ ಆದರೆ ಶಾಸನದಲ್ಲಿ "ಪನಸೋಗೆಯ ಶ್ರೀಧರದೇವರ" ಉಲ್ಲೇಖವಿದೆ.
10ನೇ ಶತಮಾನ ಕಾಲದ ನಿಶದಿ ಶಾಸನ
ಇದೇ "ಪನಸೋಗೆಯ ಶ್ರೀಧರ ದೇವರ" ಉಲೇಖವಿರುವ ಮತ್ತೊಂದು ಶಾಸನವು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಕಂಡು ಬರುತ್ತದೆ. ಮಾವಿನಕೆರೆ ಗ್ರಾಮದ ಶಾಸನದ ಕಾಲ 10ನೇ ಶತಮಾನ. ಈ ಹಿನ್ನೆಲೆಯಲ್ಲಿ "ಪನಸೋಗೆಯ ಶ್ರೀಧರದೇವರ" ಉಲ್ಲೇಖ ಹಾಗೂ ಲಿಪಿಯ ಆಧಾರದ ಮೇಲೆ ಶಾಸನದ ಕಾಲವನ್ನು 10-11ನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಬಹುದಾಗಿದೆ.
ಶಾಸನದ ವಿಶ್ಲೇಷಣೆ ಮಾಡುವುದಾದರೆ ಕೊಂಡಕುಂದಾನ್ವಯ - ಶಾಸನವು "ಕೊಂಡಕುಂದಾನ್ವಯದ ಉಲ್ಲೇಖದಿಂದ ಆರಂಭವಾಗುತ್ತದೆ. ಇಲ್ಲಿ ಕೊಂಡಕುಂದ ಪದವು "ಕುಂದಕುಂದಾ + ಅನ್ವಯ" ಎಂದಾಗುತ್ತದೆ. ಜೈನ ಧರ್ಮದಲ್ಲಿ ಗುರುಪರಂಪರೆಗಳನ್ನು "ಸಂಘ", "ಗಣ", "ಗಚ್ಛ", "ಅನ್ವಯ", "ಬಳಿ", "ವಿಭವ" ಎಂದು ವರ್ಗೀಕರಿಸಲಾಗುತ್ತದೆ. ಇಲ್ಲಿ ಉಲ್ಲೇಖಿತವಾಗಿರುವ "ಕೊಂಡಕುಂದಾನ್ವಯ" ಎಂದರೆ ಇದು ಜೈನ ಆಚಾರ್ಯರಲ್ಲೇ ಅಗ್ರಗಣ್ಯರಾದ "ಆಚಾರ್ಯ ಕುಂದ ಕುಂದರ ಗುರು ಪರಂಪರೆಗೆ" ಸೇರಿದುದು ಎಂದಾಗುತ್ತದೆ.
ನಿಶದಿ ಎಂದರೆ ಸಮಾಧಿ ಹೊಂದಿದ ಎಂದರ್ಥ
ಇನ್ನು ದೇಶಿಗಗಣ ಎಂದರೆ ಕುಂದಕುಂದರ ಗುರುಪರಂಪರೆಯ ದೇಶಿಗಗಣಕ್ಕೆ ಸೇರಿದ ಎಂದರ್ಥ. ಪನಸೋಗೆ ಎಂಬುದು ಇಂದಿನ ಮೈಸೂರು ಜಿಲ್ಲೆ ಕೃಷ್ಣರಾಜನಗರ (ಕೆ.ಆರ್.ನಗರ) ತಾಲೂಕು ಚಿಕ್ಕಹನಸೋಗೆ. ಪನಸೋಗೆ ಅಂದಿನ ದಿನಗಳಲ್ಲಿ ಒಂದು ಪ್ರಮುಖ ಜೈನ ಕೇಂದ್ರವಾಗಿತ್ತು. ಶಾಸನದಲ್ಲಿ ನಿಶದಿ"ಗೆ ಎಂಬ ಪದದ ಉಲ್ಲೇಖವಿದ್ದು, ಇದು ಸಲ್ಲೇಖನ ವ್ರತವನ್ನು ಕೈಗೊಂಡು ಮರಣ - ಸಮಾಧಿ ಹೊಂದಿದ ಶಾಸನ ಎಂದು ತಿಳಿದು ಬರುತ್ತದೆ.
ಈ ಶಾಸನಗಳನ್ನು ಓದಿ ಮಾರ್ಗದರ್ಶನ ನೀಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿಯವರಾಗಿದ್ದಾರೆ.
ಹಾಗೆಯೇ ಶಾಸನದ ಅಧ್ಯಯನಕ್ಕೆ ಮದ್ರಾಸ್ ವಿಶ್ವವಿದ್ಯಾಲಯದ ಜೈನಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರಿಯದರ್ಶನಾ ಜೈನ್ ಅವರು ಮಾರ್ಗದರ್ಶನ ನೀಡಿದ್ದರೆ ನಿತಿನ್ ಅವರ ತಂದೆ ಡಾ.ಹೆಚ್.ಪಾರ್ಶ್ವನಾಥ್ ಮತ್ತು ಚಾಮರಾಜನಗರ ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ನಿರ್ಮಲ್ ಕುಮಾರ್ ಹಾಗೂ ವಿಜಯಪಾರ್ಶ್ವನಾಥ ಬಸದಿಯ ಪುರೋಹಿತರಾದ ಪಂಡಿತ ಪ್ರೇಮ್ ಕುಮಾರ್ ಅವರು ಸಹಕಾರ ನೀಡಿದ್ದಾರೆ. ಇವರೆಲ್ಲರ ಕಾರಣದಿಂದಾಗಿ ನಿಶದಿ ಶಾಸನದ ವಿಶೇಷತೆ ಜನರಿಗೆ ಗೊತ್ತಾಗುವಂತಾಗಿದೆ. (ಮಾಹಿತಿಗೆ 9880818869)












Click it and Unblock the Notifications