ಇನ್ನೇನು ಬೇಸಿಗೆ ಬಂತು; ಬಂಡೀಪುರದಲ್ಲಿ ಕಾಡ್ಗಿಚ್ಚು ತಡೆಗೆ ಸಜ್ಜಾದರು ಅರಣ್ಯ ಸಿಬ್ಬಂದಿ
ಚಾಮರಾಜನಗರ, ಫೆಬ್ರವರಿ 14: ಬೇಸಿಗೆ ಬರುತ್ತಿದ್ದಂತೆಯೇ ಬಂಡೀಪುರದಲ್ಲಿ ಕಾಡ್ಗಿಚ್ಚಿನ ಆತಂಕ ಶುರುವಾಗುತ್ತದೆ. ಪ್ರತಿವರ್ಷವೂ ಅಗ್ನಿ ಅನಾಹುತದಿಂದ ಸಾವಿರಾರು ಎಕರೆ ಅರಣ್ಯ ನಾಶವಾಗುತ್ತಿದ್ದು, ಈ ಬಾರಿ ಇದಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಅರಣ್ಯಾಧಿಕಾರಿಗಳು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಮಲೆಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಕಾಡಿಗೆ ಬೆಂಕಿ ಬಿದ್ದು, ಅರಣ್ಯ ಮತ್ತು ಕಾಡುಪ್ರಾಣಿಗಳು ಆಹುತಿಯಾಗುವುದನ್ನು ತಪ್ಪಿಸಲು ಮಹದೇಶ್ವರ ವನ್ಯಜೀವಿ ವಿಭಾಗದ ಎಲ್ಲಾ ಸಿಬ್ಬಂದಿಗೆ ಬೆಂಕಿ ನಂದಿಸುವ ತಾಂತ್ರಿಕ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಸಿಎಫ್ ಗಳು, ಆರ್ ಎಫ್ ಒಗಳು, ಗಾರ್ಡ್‌ಗಳು, ವಾಚರ್ ಗಳು, ಫ್ರಂಟ್‌ಲೈನ್ ಸಿಬ್ಬಂದಿ, ಫೈರ್ ಬಿಟರ್ಸ್, ವಾಟರ್ ಸ್ಪ್ರೇ ಟ್ಯಾಂಕರ್ಸ್, ತಾಂತ್ರಿಕ ವರ್ಗದ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಮಹಾರಾಷ್ಟ್ರದ ಆಗ್ರೋ ಮಿಷನ್ ವತಿಯಿಂದ ನೂತನ ತಾಂತ್ರಿಕ ಉಪಕರಣಗಳನ್ನು ಬಳಕೆ ಮಾಡುವ ಬಗ್ಗೆ ತರಬೇತಿ ನೀಡಲಾಗಿದೆ.

ಅರಣ್ಯದಲ್ಲಿ ಅಗ್ನಿ ಅನಾಹುತ ಸಂಭವಿಸಿದ ಸಂದರ್ಭ ಅದರ ತೀವ್ರತೆಗೆ ಅನುಗುಣವಾಗಿ ಯಾವಾಗ, ಎಲ್ಲಿ, ಹೇಗೆ ಮತ್ತು ಯಾವ ಉಪಕರಣಗಳನ್ನು ಬಳಸಬೇಕೆಂಬುದರ ಬಗ್ಗೆ ಮತ್ತು ಅಗ್ನಿ ಅನಾಹುತ ತಡೆಗೆ ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕು ಎಂಬುದರ ಕುರಿತಂತೆ ಮತ್ತು ಉಪಕರಣಗಳ ಬಳಕೆ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ.
ಬಂಡೀಪುರದಲ್ಲಿ ಕೆಲವು ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇದ್ದು ಕಳೆದ ವರ್ಷ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತಲ್ಲದೆ, ಹೆಲಿಕಾಪ್ಟರ್ ಗಳ ಸಹಾಯದಿಂದ ಬೆಂಕಿಯನ್ನು ಆರಿಸಲಾಗಿತ್ತು. ಈ ಅಗ್ನಿ ದುರಂತದಲ್ಲಿ ನೂರಾರು ವನ್ಯಜೀವಿಗಳು ಸಜೀವ ದಹನವಾದವು ಅಷ್ಟೇ ಅಲ್ಲ ಮರಕಾಡುಗಳು ಉರಿದು ಹೋಗಿ ಅರಣ್ಯ ಬೋಳಾಗಿತ್ತು.












Click it and Unblock the Notifications