ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಶವ ಹೂಳುವುದೇ ಕಷ್ಟ!
ಚಾಮರಾಜನಗರ, ಸೆಪ್ಟೆಂಬರ್ 07 : ಗ್ರಾಮಕ್ಕೊಂದು ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರು ಶವವನ್ನು ತುಂಬಿ ಹರಿಯುವ ನದಿಯಲ್ಲೇ ಹೊತ್ತೊಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಿಂದುಳಿದ ವರ್ಗಗಳು ಮತ್ತು ದಲಿತರೇ ವಾಸ ಮಾಡುವ ಈ ಗ್ರಾಮಕ್ಕೊಂದು ಸ್ಮಶಾನವಿಲ್ಲ. ಆದ್ದರಿಂದ, ಇಂದು ತುಂಬಿದ ನದಿಯಲ್ಲೇ ಹೆಣ ಹೊತ್ತುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸುವರ್ಣಾವತಿ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಶುಕ್ರವಾರ ಶವವನ್ನು ಕುಟುಂಬಸ್ಥರು ಹರಿಯುವ ನದಿಯಲ್ಲೇ ಹೊತ್ತುಕೊಂಡು ಸುಮಾರು 3 ಕಿ.ಮೀ. ದೂರ ಸಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಹಲವಾರು ವರ್ಷಗಳಿಂದ ರುದ್ರಭೂಮಿಗಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇನ್ನು ಮಾಂಬಳ್ಳಿ ಗ್ರಾಮದವರೇ ಆದ ಜಯಣ್ಣರವರು ಎರಡು ಬಾರಿ ಶಾಸಕರಾಗಿದ್ದರೂ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ಇದೀಗ ಕೊಳ್ಳೇಗಾಲ ಕ್ಷೇತ್ರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಆರಿಸಿ ಬಂದಿದ್ದು ಅವರ ಗಮನಕ್ಕೆ ಈ ವಿಚಾರ ಬಂದಿದೆಯೋ ಗೊತ್ತಿಲ್ಲ. ಆದರೆ, ಇದೀಗ ನದಿಯಲ್ಲಿ ಹೆಣಹೊತ್ತು ಸಾಗುತ್ತಿರುವ ದೃಶ್ಯಗಳು ವೈರಲ್ ಆಗಿದ್ದು ಇನ್ನು ಮುಂದೆಯಾದರೂ ಗ್ರಾಮಕ್ಕೊಂದು ಸ್ಮಶಾನವನ್ನು ಒದಗಿಸಿಕೊಟ್ಟು ನದಿಯಲ್ಲಿ ಹೆಣಹೊತ್ತು ಸಾಗುವ ಸಂಕಷ್ಟಕ್ಕೆ ಇತಿಶ್ರೀ ಹಾಡಬೇಕಾಗಿದೆ.












Click it and Unblock the Notifications