PM Modi Bandipur Visit: ಬಂಡೀಪುರದಲ್ಲಿ ಸಫಾರಿ ದಿರಿಸಿ ಜೊತೆ ಗಾಗಲ್ಸ್, ಟೋಪಿ ಹಾಕಿಕೊಂಡು ಮಿಂಚಿದ ಪ್ರಧಾನಿ ಮೋದಿ
ಬಂಡೀಪುರ, ಏಪ್ರಿಲ್, 09: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಕೊಟ್ಟಿದ್ದು, ಈ ವೇಳೆ ಅವರು ಓಪನ್ ಜೀಪ್‌ನಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ.
ನರೇಂದ್ರ ಮೋದಿ ಅವರು ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿ ತೊಟ್ಟು ಓಪನ್ ಜೀಪ್‌ನಲ್ಲಿ ಕಾಡಿನಲ್ಲಿ ಸಫಾರಿ ನಡೆಸಿ ಮಿಂಚಿದ್ದಾರೆ. ಒಟ್ಟು 9 ವಾಹನಗಳು ಪ್ರಧಾನಿ ಮೋದಿಯವರ ಜೊತೆಗಿದ್ದು, ಸದ್ಯ ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ಭೇಟಿ ಕೊಡುತ್ತಿದ್ದಾರೆ. ಸಫಾರಿ ವೇಳೆ ನರೇಂದ್ರ ಮೋದಿ ಹುಲಿಯನ್ನು ವಿಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೋದಿಯವರ ಸಫಾರಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅಲ್ಲದೇ ನಂತರ ತೆಪ್ಪಕಾಡಿನಲ್ಲಿ ಬೊಮ್ಮ-ಬೆಳ್ಳಿ ದಂಪತಿಯನ್ನು ಕೂಡ ಮೋದಿ ಭೇಟಿ ಮಾಡಿ ಸನ್ಮಾನಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್ 08) ಮೈಸೂರಿಗೆ ಬಂದಿಳಿದಿದ್ದು, ಭಾನುವಾರ (ಏಪ್ರಿಲ್ 9) ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ.
ಭಾನುವಾರ ಬೆಳಗ್ಗೆ 7:30ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಎಪ್‌ಪಿಜಿ ಭದ್ರತೆಯೊಂದಿಗೆ ಸಫಾರಿ ವಾಹನ ಹತ್ತಿ ಕಾಡಿನಲ್ಲಿ ಸುತ್ತಾಟ ಆರಂಭಿಸಿದ್ದಾರೆ.
ಅಂಚೆ ಚೀಟಿ ಬಿಡುಗಡೆ ಹಾಗೂ ಬಂಡೀಪುರದಲ್ಲಿ ಹಳೇ ಸಫಾರಿ ಕೇಂದ್ರದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ಬಳಿಕ ಅವರು ಸರಿಸುಮಾರು 15 ಕಿಲೋ ಮೀಟರ್ ಸಫಾರಿ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಂತರ ಬೋಳಗುಡ್ಡ ಎಂಬ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಂಡು ಕಳ್ಳಬೇಟೆ ತಡೆ ಶಿಬಿರಕ್ಕೂ ಭೇಟಿ ಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರಿ ಭದ್ರತೆಯನ್ನು ಕೈಗೊಂಡಿದ್ದಾರೆ. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಿರುವ ಮೋದಿ ಅವರು, ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ‍್ಯಾಂಕ್‌ನಲ್ಲಿ ಬಂಡೀಪುರ ನಂ1 ಬರುವ ನಿರೀಕ್ಷೆ ಇದೆ.
ಸಫಾರಿ ವೇಳೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಅರಣ್ಯಾಧಿಕಾರಿಗಳು ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದ್ದಾರೆ.
ಬಂಡೀಪುರಕ್ಕೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್‌ನಲ್ಲೇ ತಡೆಯಲಾಗುತ್ತಿದೆ. ಮೋದಿ ಅವರು ಗುಂಡ್ಲುಪೇಟೆಗೆ ಬಂದರೂ ಕೂಡ, ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರಿಲ್ಲ.
ಇನ್ನು 15 ಕಿಲೋ ಮೀಟರ್ ಸಫಾರಿ ನಡೆಸಲಿರುವ ಪ್ರಧಾನಿ ಮೋದಿ, ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ, ಅಂಚೆ ಚೀಟಿ ಬಿಡುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವರಿಗೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಸಾಥ್ ನೀಡಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ. ಎರಡು ಭದ್ರತಾ ಪಡೆ ಹೆಲಿಕಾಪ್ಟರ್ ಸೇರಿದಂತೆ ಮೂರು ಹೆಲಿಕಾಪ್ಟರ್‌ನಲ್ಲಿ ಬಂಡೀಪುರಕ್ಕೆ ಬಂದಿದ್ದು, ಬಂಡೀಪುರ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಸಮವಸ್ತ್ರವನ್ನು ಹೋಲುವ ಟೀ ಶರ್ಟ್ ಧರಿಸುವ ಮೂಲಕ ನಮೋ ಮಿಂಚಿದ್ದಾರೆ.












Click it and Unblock the Notifications