ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಬಸ್ಸು ಮೂಲೆ ಸೇರಿದ್ರೂ ಕೇಳೋರಿಲ್ವೆ?
ಹನೂರು, ಮಾರ್ಚ್ 27: ಮಲೆಮಹದೇಶ್ವರ ಬೆಟ್ಟಕ್ಕೆ ಗುಂಡ್ಲುಪೇಟೆ- ಚಾಮರಾಜನಗರ- ಕೊಳ್ಳೇಗಾಲ- ಹನೂರು ತಾಲೂಕು ಮಾರ್ಗವಾಗಿ ನಿತ್ಯ ಸಂಚರಿಸುತ್ತಿದ್ದ ಕೆ.ಎ.10. ಡಿ. 9900 ಸಂಖ್ಯೆಯ ಮುಜರಾಯಿ ಇಲಾಖೆ ಬಸ್ ದುರಸ್ತಿಯಾಗಿ, ಗ್ಯಾರೇಜ್ ಸೇರಿದೆ. ಇದೀಗ ಆ ಬಸ್ಸು ತುಕ್ಕು ಹಿಡಿಯುತ್ತಿದ್ದರೂ ಸಂಬಂಧಿಸಿದವರು ಗಮನಹರಿಸುತ್ತಿಲ್ಲ.
ರಾಜ್ಯದ ಸುಪ್ರಸಿದ್ಧ ದೇವಾಲಯ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಕಾರಣದಿಂದಾಗಿಯೇ ಆದಾಯ ಸೋರಿಕೆ ಹಾಗೂ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಬಸ್ಸು ದುರಸ್ತಿ ಮಾಡಿಸದೆ ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.[ಸೋಲುವ ಭಯದಲ್ಲಿ ಗುಂಡ್ಲುಪೇಟೆಯಲ್ಲಿ ಯಡಿಯೂರಪ್ಪ ಠಿಕಾಣಿ: ಡಿಕೆಶಿ]

ಈ ಬಸ್ಸು ಕೊಳ್ಳೇಗಾಲದ ಮಲೆಮಹದೇಶ್ವರ ಕಾಲೇಜಿನ ರಸ್ತೆಯಲ್ಲಿ ಸಿಗುವ ಗ್ಯಾರೇಜ್ ನಲ್ಲಿ ಇಂಜಿನ್ ದುರಸ್ತಿಗೆಂದು ತಂದು ನಿಲ್ಲಿಸಿದ್ದು, ಒಂದು ತಿಂಗಳಿನಿಂದ ಬಿಸಿಲು, ಮಳೆ- ಗಾಳಿಗೆ ಸಿಲುಕಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.
ಬಸ್ಸಿನ ಕೆಲವು ಬಿಡಿ ಭಾಗಗಳನ್ನು ಕಳಚಿ ಮುಜರಾಯಿ ಇಲಾಖೆಯ ಇತರೆ ಬಸ್ಸುಗಳಿಗೆ ಜೋಡಿಸುತ್ತಿರುವುದು ಕಂಡು ಬಂದಿದ್ದು, ಇದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿರುವ, ಪ್ರತಿ ವರ್ಷ ಅಧಿಕ ಸಂಖ್ಯೆಯ ಭಕ್ತರನ್ನು ಹಾಗೂ ಕೋಟ್ಯಂತರ ರುಪಾಯಿ ಆದಾಯವನ್ನು ಹೊಂದಿರುವ ಈ ದೇವಾಲಯಕ್ಕೆ ಸಂಚರಿಸುವ ವಾಹನಕ್ಕೆ ಇಂಥ ದುರ್ಗತಿ ಬಂದಿದೆ.[ಇದು ಉಪಚುನಾವಣೆ ದಸರಾ! ಮೈಸೂರು ಹೋಟೆಲುಗಳು ಹೌಸ್ ಫುಲ್]
ಬಸ್ ದುರಸ್ತಿಯಾಗದ ಕಾರಣದಿಂದ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಭಾಗದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದ ಭಕ್ತರಿಗೆ ತೊಂದರೆಯಾಗಿದೆ. ಈಗಲಾದರೂ ಮೂಲೆ ಸೇರಿರುವ ಬಸ್ಸನ್ನು ದುರಸ್ತಿ ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ನೀಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications