20 ವರ್ಷಗಳ ಹಿಂದೆ ಸಮಾಧಿ ನಿರ್ಮಾಣ, ಈಗ ಅಂತ್ಯ ಸಂಸ್ಕಾರ ಚಾಮರಾಜನಗರದಲ್ಲೊಂದು ವಿಚಿತ್ರ ಘಟನೆ
ಚಾಮರಾಜನಗರ, ಜುಲೈ 25: ವ್ಯಕ್ತಿ ಮೃತಪಟ್ಟ ಬಳಿಕ ಸಮಾಧಿ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾನು ಯಾರಿಗೂ ತೊಂದರೆ ಕೊಡಬಾರದು, ತಾನು ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ-ವಿಧಾನ ನೆರವೇರಬೇಕೆಂದು ಇಚ್ಚಿಸಿ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು ಅಲ್ಲೇ ಸೋಮವಾರ ಆತನ ಅಂತ್ಯ ಸಂಸ್ಕಾರ ನೆರವೇರಿದೆ.
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟನಂಜಪ್ಪ(85) ಎಂಬವರು ಸೋಮವಾರ ದೈವಾಧೀನರಾಗಿದ್ದು, ಇವರು ತಮಗೆ 65 ವರ್ಷವಿದ್ದಾಗ, 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಸಗಳು, ಒಂದು ಲಕ್ಷ ರೂ. ಹಣವನ್ನೂ ಎತ್ತಿಟ್ಟಿದ್ದು ಆ ಹಣದಲ್ಲೇ ಅಂತ್ಯಕ್ರಿಯೆಯ ಎಲ್ಲಾ ಕಾರ್ಯಗಳು ನಡೆದಿವೆ.
ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು, ಮೂವರು ಪುತ್ರರಿದ್ದಾರೆ. ತನ್ನ ತಿಥಿಯನ್ನು ತನ್ನ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಹಾಗೂ ಹಣ ಎತ್ತಿಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದರು.

ಕ್ರಿಯಾ ಸಮಾಧಿಗೆ ವ್ಯವಸ್ಥೆ; 12 ದಿನಗಳ ಹಿಂದೆಯಷ್ಟೇ ಅನಾರೋಗ್ಯಕ್ಕೀಡಾಗಿದ್ದ ಪುಟ್ಟನಂಜಪ್ಪ, ತಮ್ನ ಮಕ್ಕಳನ್ನು ಕರೆದು ತಾವೂ ಕೂಡಿಟ್ಟಿದ್ದ ಒಂದು ಲಕ್ಷ ರೂಪಾಯಿಯನ್ನು ನೀಡಿ ಇದರಲ್ಲೇ ಅಂತ್ಯ ಸಂಸ್ಕಾರಕ್ಕೆ ಬೇಕಾಗಿರುವ ಎಲ್ಲಾ ವ್ಯವಸ್ಥೆ ಹಾಗೂ ಕಾರ್ಯಕ್ಕೆ ಬಂದವರಿಗೆ ಊಟ ಹಾಕಬೇಕೆಂದು ಮಾತು ತೆಗೆದುಕೊಂಡಿದ್ದರಂತೆ. ಜೊತೆಗೆ ಕ್ರಿಯಾ ಸಮಾಧಿ ಮಾಡಲು ಬೇಕಾದಂತಹ ಕಳಶ, ವಿಭೂತಿ, ಸೇರಿದಂತೆ ಎಲ್ಲಾ ರೀತಿಯ ಸಾಮಾನುಗಳನ್ನು ಮೊದಲೇ ಸಂಗ್ರಹಿಸಿಟ್ಟಿದ್ದರೆಂದು ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಆಸೆಯಂತೆ ಪತ್ನಿ ಪಕ್ಕದಲ್ಲೇ ಸಮಾಧಿ; ಕಳೆದ ವರ್ಷ ಪುಟ್ಟಮಲ್ಲಪ್ಪ ಪತ್ನಿ ಕೊರೊನಾದಿಂದ ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು. ಇನ್ನು ತಮ್ಮ ಅಂತ್ಯಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ಸಾಮಾನುಗಳನ್ನು ತಂದಿಟ್ಟಿದ್ದರು.

ಕಳೆದ 12 ದಿನಗಳ ಹಿಂದೆ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು. ಭಾನುವಾರ ತಂದೆಯವರು ಅಸುನೀಗಿದ್ದು ಇಂದು ಅವರು ನಿರ್ಮಿಸಿಕೊಂಡ ಸಮಾಧಿಯಲ್ಲೇ, ಅವರು ಕೂಡಿಟ್ಟ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ, ಮುಂದಿನ ತಿಥಿ ಕಾರ್ಯವನ್ನು ಅದೇ ದುಡ್ಡಿನಲ್ಲಿ ಮಾಡಲಾಗುತ್ತದೆ ಎಂದು ಅವರ ಮಗ ಗೌಡಿಕೆ ನಾಗೇಶ್ ತಿಳಿಸಿದ್ದಾರೆ.












Click it and Unblock the Notifications