ಮಲ್ಲಿಗೆಹಳ್ಳಿ: ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಿಗಿ ಭದ್ರತೆ, ಯಾಕೆ ಗೊತ್ತಾ?, ಇಲ್ಲಿದೆ ವಿವರ
ಚಾಮರಾಜನಗರ, ಆಗಸ್ಟ್, 02: ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಇದರ ಬೆನ್ನಲ್ಲೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆ ಮೇಲೆ ಕಣ್ಗಾವಲು ಇಡುವುದರ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಬಿಗಿಭದ್ರತೆ ಒದಗಿಸುತ್ತಿರುವ ಘಟನೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ನಡೆದಿದೆ.
ಕಳೆದ ಜುಲೈ 25ರಂದು ಹರ್ಷಿತ್(9) ಎಂಬಾತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಪರಿಣಾಮ ಆಗಿನಿಂದ ಉಳಿದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯ ಪಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯು ಈ ಕ್ರಮ ಕೈಗೊಂಡಿದೆ. ಮಕ್ಕಳ ಭಯ ಹೋಗಲಾಡಿಸಲು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಮಕ್ಕಳನ್ನು ಅರಣ್ಯ ಸಿಬ್ಬಂದಿ ಭದ್ರವಾಗಿ ಕರೆದೊಯ್ಯುತ್ತಿದ್ದಾರೆ.

ಗ್ರಾಮದಲ್ಲೇ ಕ್ಯಾಂಪ್ ಮಾಡಿದ್ದು, ಶಾಲೆ ಗೇಟ್‌ನಲ್ಲೇ ಅರಣ್ಯ ಸಿಬ್ಬಂದಿ ನಿಲ್ಲಲ್ಲಿದ್ದು, ಶಾಲೆಯ ಮೇಲೆ ಕಣ್ಗಾವಲಿಟ್ಟಿದೆ. ಜೊತೆಗೆ ಚಿರತೆ ಸೆರೆಗೆ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದು, 5-6 ಗ್ರಾಮಗಳಲ್ಲಿ ಬೋನನ್ನು ಕೂಡ ಇಡಲಾಗಿದೆ.
ಚಿರತೆ ದಾಳಿ: 9 ವರ್ಷದ ಬಾಲಕನಿಗೆ ಗಾಯ
ಇತ್ತೀಚೆಗಷ್ಟೇ ಮಲ್ಲಿಗೆಹಳ್ಳಿಯಲ್ಲಿ ಚಿರತೆ ದಾಳಿಯಿಂದ ಹರ್ಷಿತ್ (09) ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು, ಇದನ್ನು ಕಂಡ ಜನರು ಚೀರಾಟಿ ಕೂಗಾಡಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿಹೋಗಿದೆ. ಇನ್ನು ಹರ್ಷಿತ್‌ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿತ್ತು.
ಬಳಿಕ ಯಳಂದೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು.
ಹಾಗೆಯೇ ಹಲವು ದಿನಗಳಿಂದ ಯಳಂದೂರು ತಾಲೂಕಿನ ಕೆಸ್ತೂರು, ಮಲ್ಲಿಗಹಳ್ಳಿ, ಕಟ್ನವಾಡಿ, ಹೊಸೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮಲ್ಲಿಗೆಹಳ್ಳಿ ಸೇರಿದಂತೆ 6 ಕಡೆ ಬೋನುಗಳನ್ನುಇಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಆದರೆ, ಚಿರತೆ ಸೆರೆಯಾಗದೇ ಬಾಲಕನ ಮೇಲೆ ಎರಗಿದ ಆತಂಕಕಾರಿ ಘಟನೆ ನಡೆದಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ನಂತರ ಬಾಲಕಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಅಸುನೀಗಿದ್ದಳು.












Click it and Unblock the Notifications