ತಮ್ಮಡಿ ಅರ್ಚಕರಿಗೆ ಮಲೆಮಹದೇಶ್ವರನ ಪೂಜಾ ಭಾಗ್ಯ ಕೈ ತಪ್ಪಿದ್ದೇಕೆ? ಏನಿದು ಸಂಕಷ್ಟ?
ಚಾಮರಾಜನಗರ, ಮೇ 27: ಜೈಲಿಗೆ ಹೋಗಿ ಬಂದಿರುವರು ಮಹದೇಶ್ವರರ ಪೂಜೆ ಮಾಡಲು ಅರ್ಹರಲ್ಲ ಎಂಬ ಸಂಪ್ರದಾಯ ಇರುವ ಕಾರಣ ಇದೀಗ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ತಮ್ಮಡಿ(ಅರ್ಚಕರು) ಪೂಜಾ ಭಾಗ್ಯವನ್ನು ಕಳೆದುಕೊಂಡು ಸಂಕಷ್ಟ ಎದುರಿಸುವಂತಾಗಿದೆ. ಏನಿದು ಸಂಕಷ್ಟ? ಆಗಿದ್ದೇನು? ಎಂಬುದನ್ನು ನೋಡುತ್ತಾ ಹೋದರೆ ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ.
ಮಲೆಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತಿರುವ ಮಲೆಮಹದೇಶ್ವರ ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆಯುತ್ತಾ ಬಂದಿದ್ದು, ಈತನಿಗೆ ಎಲ್ಲೆಡೆಯೂ ಭಕ್ತರಿದ್ದಾರೆ. ಇಂತಹ ಮಲೆ ಮಹದೇಶ್ವರನಿಗೆ ದಿನ ನಿತ್ಯ ಪೂಜಾ ಕೈಂಕರ್ಯ ಮತ್ತು ಸೇವೆಗಳನ್ನು ಮಾಡಲು ಅದರಲ್ಲೂ ಗರ್ಭಗುಡಿಯಲ್ಲಿ ಪೂಜೆ ಮಾಡಲು ಅರ್ಹತೆ ಪಡೆದವರು ಬೇಡಗಂಪಣ ಸಮುದಾಯದವರಾಗಿದ್ದಾರೆ. ಬೇರೆ ದೇಗುಲಗಳಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರಿದ್ದರೆ ಇಲ್ಲಿ ಮೊದಲಿನಿಂದಲೂ ಬೇಡಗಂಪಣ ಸಮುದಾಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬಂದಿದೆ.

ಇಷ್ಟಕ್ಕೂ ಬೇಡಗಂಪಣ ಸಮುದಾಯದ ಎಲ್ಲರೂ ಪೂಜೆ ಮಾಡಲು ಸಾಧ್ಯವಿಲ್ಲ. ಮಹದೇಶ್ವರ ಪೂಜೆ ಮಾಡುವವರು ಹಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕಟ್ಟುಪಾಡು ಸಂಪ್ರದಾಯ, ಕಟ್ಟಳೆಗಳಂತೆ ಪೂಜೆ ಮಾಡುತ್ತಾ ಬರುವವರು ನಿಯಮ ಮೀರಿದರೆ ಪೂಜೆ ಮಾಡಲು ಅವಕಾಶ ಇರುವುದಿಲ್ಲ. ತಮ್ಮದೇ ಆದ ಸಾಂಪ್ರದಾಯಿಕ ಕಟ್ಟುಪಾಡು, ನಿಯಮಾವಳಿ ಮಾಡಿಕೊಂಡಿರುವುದರಿಂದ ಅದನ್ನು ಪಾಲಿಸಿಕೊಂಡೇ ಮಹದೇಶ್ವರನ ಪೂಜಿಸಿಕೊಂಡು ಬಂದಿದ್ದಾರೆ. ಅದರಂತೆ ಮಹದೇಶ್ವರನಿಗೆ ಪೂಜೆ ಮಾಡುವಾಗ ಎಂಜಲು ತಾಗದಂತೆ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವುದು, ಉಪವಾಸವಿದ್ದು ಮಹದೇಶ್ವರನ ಆರಾಧನೆ, ಪೂಜಾ ಕೈಂಕರ್ಯಗಳನ್ನು ಮಾಡುವುದು ನಡೆದುಕೊಂಡು ಬಂದಿದೆ.
ಆ ಗಲಾಟೆಯಿಂದ ಸಂಕಷ್ಟ ಎದುರಾಯಿತು
ಒಂದು ವೇಳೆ ಪೂಜೆ ಮಾಡುತ್ತಿದ್ದವರು ಹಾವು ಕಚ್ಚಿಸಿಕೊಂಡರೆ, ಜೈಲಿಗೆ ಹೋಗಿ ಬಂದರೆ, ಎರಡನೇ ಮದುವೆ ಆದರೆ ಮತ್ತು ಚಪ್ಪಲಿಯಲ್ಲಿ ಹೊಡೆಸಿಕೊಂಡರೆ ಅಂಥವರು ಯಾವುದೇ ಕಾರಣಕ್ಕೂ ಮಹದೇಶ್ವರನ ಪೂಜೆ ಮಾಡಬಾರದು. ಅಷ್ಟೇ ಅಲ್ಲದೆ ಅಂಥವರು ಗರ್ಭಗುಡಿಯಲ್ಲಿ ದೇವರ ಮೂರ್ತಿ ಮುಟ್ಟುವಂತಿಲ್ಲ. ಸ್ವಚ್ಛತೆ, ಅಭಿಷೇಕ, ಮಂಗಳಾರತಿ, ಹೂ ಅಲಂಕಾರ ಸೇರಿದಂತೆ ದೇವರ ಯಾವುದೇ ಕಾರ್ಯವನ್ನು ಮಾಡುವಂತಿಲ್ಲ ಎಂಬ ಸಂಪ್ರದಾಯ ಹಿಂದಿನಿಂದಿಲೂ ಇದೆ. ಆದರೆ ಇದೀಗ ಅದು ಬಯಲಾಗಲು ಕಾರಣ ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಸಂದರ್ಭ ನಡೆದ ಆ ಗಲಾಟೆಯಿಂದಾಗಿದೆ.

ತಮಗೆ ಯಾವುದೇ ಮೂಲಸೌಕರ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈ ವೇಳೆ ಅಧಿಕಾರಿಗಳು ಮನವೊಲಿಸಿ ಒಂದೆರಡು ಮಂದಿ ಮತ ಚಲಾಯಿಸುವಂತೆ ಮಾಡಿದ್ದರು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುತ್ತಿದ್ದಂತೆಯೇ ಜನ ಊರು ಬಿಟ್ಟು ಪರಾರಿಯಾಗಿದ್ದರು. ಜನರಿಲ್ಲದೆ ಜಾನುವಾರು, ಸಾಕುಪ್ರಾಣಿಗಳು ಮೇವು ನೀರಿಲ್ಲದೆ ಸಂಕಷ್ಟ ಎದುರಿಸುವಂತಾಗಿತ್ತು. ಕೊನೆಗೂ ಜಿಲ್ಲಾಡಳಿತ ಊರು ಬಿಟ್ಟವರನ್ನು ಕರೆತರುವ ಕೆಲಸ ಮಾಡಿತ್ತು.
ಬೇಡಗಂಪಣ ಸಮುದಾಯ ಯಾವುದು?
ಇನ್ನು ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿ ಜೈಲಿಗೆ ಹಾಕಿದ್ದು, ಕೆಲವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ. ಹೀಗೆ ಜೈಲಿಗೆ ಹೋದವರಲ್ಲಿ 46 ಮಂದಿಯಿದ್ದು ಅದರಲ್ಲಿ 20 ಮಹಿಳೆಯರು, 26 ಪುರುಷರಾಗಿದ್ದಾರೆ. ಇವರಲ್ಲಿ ಮಹದೇಶ್ವರನ ಆರಾಧಿಸುವ, ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಬೇಡಗಂಪಣ ಸಮುದಾಯದ ತಮ್ಮಡಿಗಳಿದ್ದು, ಅವರೀಗ ಜೈಲಿಗೆ ಹೋಗಿ ಬಂದಿರುವುದರಿಂದ ಅರ್ಚಕರಾಗಿ ಮಲೆಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ದೇಗುಲದ ಗರ್ಭಗುಡಿಯಲ್ಲಿ ಪೂಜೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬೇಸರದಲ್ಲಿ ದಿನ ಕಳೆಯುವಂತಾಗಿದೆ.

ಇದೆಲ್ಲದರ ನಡುವೆ ಬೇಡಗಂಪಣ ಸಮುದಾಯ ಯಾವುದು? ಅವರೇಕೆ ಮಲೆಮಹದೇಶ್ವರನ ಪೂಜೆ ಮಾಡುತ್ತಾರೆ? ಎಂಬುದರ ಹಿಂದೆ ಕುತೂಹಲಕಾರಿ ವಿಚಾರಗಳು ಇವೆ. ಪೌರಾಣಿಕ ಕಥೆಗಳಲ್ಲಿ ಬರುವ ಶಿವನಿಗೆ ಮಾಂಸದ ನೈವೇದ್ಯವಿಟ್ಟು ಪೂಜಿಸಿದಲ್ಲದೆ, ತನ್ನ ಕಣ್ಣನ್ನೇ ಕಿತ್ತುಕೊಟ್ಟ ಬೇಡರಕಣ್ಣಪ್ಪ ಎಲ್ಲರಿಗೂ ಗೊತ್ತಿರುತ್ತದೆ. ಆತನ ಸಮುದಾಯವೇ ಬೇಡಗಂಪಣ ಸಮುದಾಯವಾಗಿದೆ. ಹಿಂದೆ ಇವರು ಕಾಡುಗಳಲ್ಲಿ ಬೇಟೆಯಾಡಿ ಬದುಕು ಸಾಗಿಸುತ್ತಿದ್ದರು.
ಮಹದೇಶ್ವರನ ಭಕ್ತರಾಗಿ, ಆರಾಧಕರಾದರು
ರಾಜ್ಯದಲ್ಲಿರುವ ಪುರಾತನ ಬುಡಕಟ್ಟು ಸಮುದಾಯಗಳಲ್ಲಿ ಇವರ ಸಮುದಾಯವೂ ಒಂದಾಗಿದೆ. ಇವರು ಹಿಂದೆ ಶ್ರೀಶೈಲದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ರಾಜ ಮಹಾರಾಜರಿಗೆ ಬೇಟೆಯಾಡಲು, ಯುದ್ಧ ಮಾಡಲು ಬಿಲ್ಲು ಬಾಣ, ಈಟಿ ಮೊದಲಾದ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಿಕೊಡುವ ಕೆಲಸ ಮಾರುತ್ತಿದ್ದರಂತೆ. ಅಷ್ಟೇ ಅಲ್ಲದೆ ಬಾಣಹೊಡೆಯುವ, ಈಟಿಯಿಂದ ಇರಿಯುವ ತಂತ್ರಗಳನ್ನು ಕಲಿತಿದ್ದರಿಂದ ಇವರನ್ನು ಯುದ್ಧದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತಂತೆ. ಹೀಗೆ ವೀರತ್ವ ಮೆರೆಯುತ್ತಿದ್ದ ಈ ಸಮುದಾಯ ಕಾಲ ಕ್ರಮೇಣ ಅಲ್ಲಿಂದ ಕರ್ನಾಟಕ, ತಮಿಳುನಾಡಿನ ಗುಡ್ಡಗಾಡುಗಳತ್ತ ವಲಸೆ ಬಂದರು ಎಂದು ಹೇಳಲಾಗುತ್ತಿದೆ.
ಹೀಗೆ ವಲಸೆ ಬಂದವರು ಕಾಡಿನಲ್ಲಿ ಸೋಲಿಗರೊಂದಿಗೆ ಬೇಟೆಯಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಒಮ್ಮೆ ಇವರನ್ನು ನೋಡಿದ ಶ್ರೀಮಲೆ ಮಹದೇಶ್ವರರು ಅವರಿಗೆ ಉಪದೇಶ ನೀಡಿ ಅವರ ಮನಪರಿವರ್ತನೆ ಮಾಡಿ ಲಿಂಗಧಾರಣೆ ಮಾಡಿ ಶಿವಧೀಕ್ಷೆ ನೀಡಿದರಂತೆ. ಅಂದಿನಿಂದ ಪ್ರಾಣಿ ಬೇಟೆ, ಮಾಂಸಾಹಾರ ಸೇವನೆ ತ್ಯಜಿಸುವ ಮೂಲಕ ಜಗತ್ತಿನ ಏಕೈಕ ಸಸ್ಯಹಾರಿ ಬುಡಕಟ್ಟು ಜನಾಂಗವಾಗಿ ಬದಲಾದರಲ್ಲದೆ, ಮಹದೇಶ್ವರನ ಭಕ್ತರಾಗಿ, ಆರಾಧಕರಾಗಿ ಪರಿವರ್ತನೆಗೊಂಡರು.
ಪೂಜೆ ಸಲ್ಲಿಸಲು ಸಾಧ್ಯವಾಗದಕ್ಕೆ ಪಶ್ಚಾತ್ತಾಪ
ತಮ್ಮ ನಡೆ-ನುಡಿಯಲ್ಲಿ ಮಡಿವಂತರಾಗಿ, ಮಹದೇಶ್ವರ ಬೆಟ್ಟದ ದೇಗುಲದಲ್ಲಿ ಮಹದೇಶ್ವರರ ಪೂಜೆ ಮಾಡುವಲ್ಲಿ ಇವರು ಪ್ರಧಾನರಾದರು. ಸರತಿ ಸಾಲಿನಂತೆ ಒಂದೊಂದು ಕುಟುಂಬದ ತಮ್ಮಡಿಗಳು ನಿಗದಿತ ತಿಂಗಳಲ್ಲಿ ಗರ್ಭಗುಡಿಯಲ್ಲಿ ಪೂಜೆ ನೆರವೇರಿಸುವ ಪದ್ಧತಿ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೆ ಅವರೇ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಇನ್ಯಾರಿಗೂ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲು ಅವಕಾಶವಿಲ್ಲ.
ಸದ್ಯ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣದ ಬಳಿಕ ಜೈಲಿಗೆ ಹೋಗಿ ಬಂದ ಮಾದಪ್ಪನ ತಮ್ಮಡಿಗಳು ಗರ್ಭಗುಡಿಯಲ್ಲಿ ಪೂಜೆ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಸರತಿ ಪ್ರಕಾರ ಮಹದೇಶ್ವರರ ಪೂಜೆ ಮಾಡುವ ಅವಕಾಶ ಸಿಕ್ಕರೆ ಕುಟುಂಬದವರು ಬೇರೆಯವರಿಂದ ಪೂಜೆ ಮಾಡಿಸಬೇಕಾಗುತ್ತದೆ. ಹೀಗಾಗಿ ತಾವು ಪೂಜೆ ಮಾಡುವ ಭಾಗ್ಯ ಕಳೆದುಕೊಂಡ ತಮ್ಮಡಿಗಳು ನೋವು ಅನುಭವಿಸುತ್ತಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications