ಚಾಮರಾಜನಗರ: ತ್ರಿಶೂಲದ ಬದಲು ತಿರಂಗ ಹಿಡಿದ ಮಹಿಷ ಮರ್ಧಿನಿ
ಹನೂರು ಜನವರಿ 26: ದೇಶದೆಲ್ಲೆಡೆ ಗಣರಾಜ್ಯೋತ್ಸವ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟದಲ್ಲೂ ವಿಭಿನ್ನವಾಗಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ.
ಹೌದು.. ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು ಚಾಮರಾಜನಗರದಲ್ಲಿ ಕಂಡು ಬಂದಿದೆ. ಚಾಮರಾಜನಗರ ಜಿಲ್ಲೆಯ ಹನೂರಿನ ಪಟ್ಟಣದ ಮಹಿಷ ಮರ್ದಿನಿ ದೇವರಿಗೆ ತ್ರಿವರ್ಣ ಅಲಂಕಾರ ಮಾಡಲಾಗಿದೆ.

ತ್ರಿಶೂಲದ ಕೈಯಲ್ಲಿ ತ್ರಿವರ್ಣ ಹಿಡಿಸಿ ದೇವರಿಗೆ ವಿಶೇಷ ಅಲಂಕರಿಸಲಾಗಿದೆ. ದೇವರ ಮೂರ್ತಿಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದಲ್ಲಿ ವಸ್ತ್ರಲಂಕಾರ ಮಾಡಲಾಗಿದೆ. ದೇವಾಲಯದಲ್ಲೂ ಗಣತಂತ್ರದ ಸಡಗರ ಕಂಡು ಬಂದಿದೆ.
ಚಾಮರಾಜನಗರದಲ್ಲಿ ಸಚಿವ ವೆಂಕಟೇಶ್ ಧ್ವಜಾರೋಹಣ
ಇಂದು ಚಾಮರಾಜನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಸಂಭ್ರಮ-ಸಡಗರದಿಂದ 75 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಚಾಮರಾಜನಗರದ ಡಾ.ಬಿ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣತಂತ್ರ ಹಬ್ಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಅರಣ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಗೌರವ ವಂದನೆ ಸಲ್ಲಿಸಲಾಯಿತು.
ಇನ್ನು, ಸಚಿವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಪೂರ್ಣ ಸಂವಿಧಾನ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕು ಎಂದರು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮಡಿದ ಸಂತ್ರಸ್ತ ಕುಟುಂಬಗಳಿಗೆ ಫೆ.1 ರಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಲಾಗುತ್ತಿದೆ ಎಂದರು. ಗಣತಂತ್ರ ಹಬ್ಬದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಡಿಸಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು ಇನ್ನಿತರರು ಇದ್ದರು.












Click it and Unblock the Notifications