ಆರು ವರ್ಷಗಳ ಬಳಿಕ ಬಿಳಿಗಿರಿರಂಗನ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ
ಚಾಮರಾಜನಗರ, ಮಾರ್ಚ್ 11: ಶತಮಾನಕ್ಕೂ ಹಳೆಯದಾದ ರಥವು ಸಂಪೂರ್ಣವಾಗಿ ಶಿಥಿಲಗೊಂಡಿದ್ದರಿಂದ ಮತ್ತು ಕೋವಿಡ್ ಕಾರಣದಿಂದಾಗಿ ಕಳೆದ ಆರು ವರ್ಷಗಳಿಂದ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ನಡೆದಿರಲಿಲ್ಲ. ಆದರೆ ಈ ಬಾರಿ ಅದ್ಧೂರಿಯಾಗಿ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ 16ರಂದು ಬಿಳಿಗಿರಿ ರಂಗನಾಥಸ್ವಾಮಿಯ ರಥೋತ್ಸವವು ಅದ್ಧೂರಿಯಾಗಿ ನಡೆಯುವುದರೊಂದಿಗೆ ಗತ ಇತಿಹಾಸದ ನೆನಪು ಮರುಕಳಿಸಲಿದ್ದು, ಲಕ್ಷಾಂತರ ಮಂದಿ ರಥೋತ್ಸವದಲ್ಲಿ ಪಾಲ್ಗೊಂಡು ರಂಗನಾಥಸ್ವಾಮಿಗೆ ಹಣ್ಣು-ಧವನ ಎಸೆದು ಸಂತೃಪ್ತರಾಗಲಿದ್ದಾರೆ.

ಸಂತೃಪ್ತರಾಗಲಿರುವ ಭಕ್ತರು
ಹಾಗೆ ನೋಡಿದರೆ ಬಿಳಿಗಿರಿ ರಂಗನಾಥಸ್ವಾಮಿಯ ರಥವು ಸುಮಾರು 100 ವರ್ಷಗಳಿಗಿಂತ ಹಳೆಯದಾಗಿದ್ದು, 2016ರಲ್ಲಿ ರಥವು ಸಂಪೂರ್ಣ ಶಿಥಿಲವಾದ ಕಾರಣ ರಥೋತ್ಸವ ನಡೆಸುವುದು ಕಷ್ಟವಾಗಿದ್ದರಿಂದ ರಥೋತ್ಸವವನ್ನು ನಿಲ್ಲಿಸಲಾಗಿತ್ತು. ಜತೆಗೆ ಹೊಸ ರಥದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಹೊಸ ರಥದ ನಿರ್ಮಾಣ ಕಾರ್ಯ ಕಳೆದ ಆರು ವರ್ಷಗಳಿಂದ ಪ್ರಗತಿಯಲ್ಲಿದ್ದ ಕಾರಣದಿಂದಾಗಿ ರಥೋತ್ಸವ ನಡೆದಿರಲಿಲ್ಲ. ಪ್ರತಿ ವರ್ಷವೂ ಭಕ್ತರು ಈ ಬಾರಿ ನಡೆಯಬಹುದು ಎಂಬ ಕಾತರದಿಂದ ಕಾಯುತ್ತಲೇ ಬಂದಿದ್ದರಾದರೂ ರಥೋತ್ಸವವನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ ಮಾತ್ರ ದೊರೆತಿರಲಿಲ್ಲ.

16 ಅಡಿಯ ರಥ ನಿರ್ಮಾಣ
ರಥ ನಿರ್ಮಾಣವಾಗದ ಹೊರತು ರಥೋತ್ಸವ ನಡೆಸುವುದು ಅಸಾಧ್ಯವಾಗಿತ್ತು. ರಥದ ನಿರ್ಮಾಣದ ಕಾರ್ಯವನ್ನು ಬಹುಬೇಗ ಮುಗಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಹೀಗಾಗಿ ಬ್ರಹ್ಮರಥ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಸದ್ಯ 16 ಅಡಿಯ ಬಿಳಿಗಿರಿ ರಂಗನಾಥಸ್ವಾಮಿ ಬ್ರಹ್ಮರಥವನ್ನು 96 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರಿನ ಪ್ರಧಾನ ಶಿಲ್ಪಿ ಬಿ.ಎಸ್. ಬಡಿಗೇರ ಹಾಗೂ ಇತರೆ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10ರಿಂದ 13 ಶಿಲ್ಪಿಗಳು ರಥದ ನಿರ್ಮಾಣ ಮಾಡಿದ್ದಾರೆ.
ಇದು 29 ಫ್ರೇಂಗಳನ್ನು ಹೊಂದಿದ್ದು, ಈ ಬ್ರಹ್ಮರಥಕ್ಕಾಗಿ 706.65 ಘನ ಅಡಿ ಬಿ ದರ್ಜೆಯ ತೇಗದ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಿ ಬಳಸಲಾಗಿದೆ. ರಥದಲ್ಲಿ ಪುರಾಣದಲ್ಲಿ ಬರುವ ದೇವಾನು ದೇವತೆಗಳ ವಿಗ್ರಹ, ಇತರೆ ಕುಸರಿ ಕೆತ್ತನೆಗಳನ್ನು ಮಾಡಲಾಗಿದೆ. ಒಟ್ಟಾರೆ ರಥ ನಿರ್ಮಾಣ ವಾಗಿರುವುರಿಂದ ಜತೆಗೆ ಕೋವಿಡ್ ಇಳಿಮುಖವಾಗಿರುವುದರಿಂದ ರಥೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಾಧ್ಯವಾಗಿದೆ.

ರಥೋತ್ಸವ ಕುರಿತು ಸಭೆ
ರಥೋತ್ಸವ ಸೇರಿದಂತೆ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸುವ ಸಂಬಂಧ ಈಗಾಗಲೇ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಸಭೆ ನಡೆಸಿದ್ದು, ಏಪ್ರಿಲ್ 16ರಂದು ನಡೆಯಲಿರುವ ಬ್ರಹ್ಮರಥೋತ್ಸವದಲ್ಲಿ ಎಲ್ಲ ಭಕ್ತಾಧಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಬಿಳಿಗಿರಿರಂಗನಾಥ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು. ರಸ್ತೆಗಳನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ರಥ ಚಲಿಸುವ ರಥದ ಬೀದಿಯಲ್ಲೂ ರಥದ ಚಲನೆಗೆ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ಸಂಪ್ರದಾಯದಂತೆ ರಥೋತ್ಸವಕ್ಕೂ ಮೊದಲು ಕೈಗೊಳ್ಳಬೇಕಿರುವ ರಥದ ಮೊದಲ ಚಲನೆಯ ಮಟತೇರು ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ರಥೋತ್ಸವದಲ್ಲಿ ಸಂಭ್ರಮಿಸಲು ತಯಾರಿ
ಬಿಳಿಗಿರಿರಂಗನ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಕಾಂಪೌಂಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹೊಸ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗನೇ ಆರಂಭಿಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಸಹ ವಿಳಂಬ ಮಾಡದೇ ತುರ್ತಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಒಟ್ಟಾರೆ ರಥೋತ್ಸವ ನಡೆಯುವುದು ಖಚಿತವಾಗಿರುವುದರಿಂದ ಭಕ್ತರು ಖುಷಿಗೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ರಥೋತ್ಸವದಲ್ಲಿ ಪಾಲ್ಗೊಳ್ಳದವರು ಈ ಬಾರಿ ರಥೋತ್ಸವದ ಸಂಭ್ರಮದಲ್ಲಿ ಮಿಂದೆಳಲು ತಯಾರಿ ನಡೆಸುತ್ತಿದ್ದಾರೆ.












Click it and Unblock the Notifications