ಕೇರಳದ ಆಸ್ಪತ್ರೆ ತ್ಯಾಜ್ಯ ಕರ್ನಾಟಕದಲ್ಲಿ ವಿಲೇವಾರಿಗೆ ಯತ್ನ: ಲಾರಿ ಚಾಲಕ ಪೊಲೀಸರ ವಶ
ಚಾಮರಾಜನಗರ, ಆಗಸ್ಟ್ 10: ಕೇರಳದಿಂದ ಮತ್ತೆ ಕರ್ನಾಟಕಕ್ಕೆ ಕಸ ತರುತ್ತಿರುವ ಗುಮಾನಿಗೆ ಈಗ ನಿದರ್ಶನವಾಗಿ ಕಸ ತುಂಬಿದ ಲಾರಿಯನ್ನು ಜನರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದಿದ್ದ ಲಾರಿಯನ್ನು ಜನರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿದ್ದ ವೇಳೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಲಾರಿಯಲ್ಲಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯದ ಮೂಟೆಗಳು ಇರುವುದು ಕಂಡು ಬಂದಿದ್ದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕದ್ದುಮುಚ್ಚಿ ಲಾರಿಗಳಲ್ಲಿ ತುಂಬಿಕೊಂಡು ಬಂದು ಗಡಿ ದಾಟಿಸಲಾಗುತ್ತದೆ. ಗುಂಡ್ಲುಪೇಟೆ ತಾಲೂಕನ್ನು ಪ್ರವೇಶಿಸಿದ ನಂತರ ಸಂಚಾರ ಕಡಿಮೆಯಿರುವ ಪ್ರದೇಶ ಅಥವಾ ಕೇರಳ ರಾಜ್ಯದವರು ಮಾಲೀಕರಾಗಿರುವ ತಾಲೂಕಿನ ನಾನಾ ಕಡೆಗಳ ತೋಟಗಳಲ್ಲಿ ತೋಡುಬಾವಿಗಳಲ್ಲಿ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಆಗಾಗ ಕೇಳಿ ಬರುವುದಕ್ಕೆ ಕಸ ತುಂಬಿದ ಲಾರಿಗಳು ಕಾಣಿಸಿಕೊಳ್ಳುವುದು ಪುಷ್ಠಿ ನೀಡಿವೆ.
ಸದ್ಯ ಕೇರಳ ನೊಂದಣಿಯ ಕಸ ತುಂಬಿದ ಲಾರಿ ಹಾಗೂ ಲಾರಿ ಚಾಲಕ ಗುಂಡ್ಲುಪೇಟೆ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಜಿಂಕೆ ಮಾಂಸ ಕತ್ತರಿಸುತ್ತಿದ್ದ ಆರೋಪಿಗಳ ಬಂಧನ
ಹನೂರು: ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಹನೂರಿನಲ್ಲಿ ನಡೆದಿದೆ. ತಾಲೂಕಿನ ಕಾಂಚಳ್ಳಿ ಗ್ರಾಮದ ನಾಗರಾಜು (38) ತೇಜಸ್ (21) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪ ವಿಭಾಗದ ಹನೂರು ಬಫರ್ ವಲಯದ ಹನೂರು ಶಾಖೆಯ ಎಲ್ಲೇಮಾಳ ಗಸ್ತಿನ ಅರಕನಹಳ್ಳ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿ ಜಿಂಕೆಯನ್ನು ಕೊಂದು ಅದರ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸುವ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಶಿಧರ್ ಬಿ.ಎಸ್ ಮಾರ್ಗದರ್ಶನದಲ್ಲಿ ಹನೂರು ಬಫರ್ ವಲಯದ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಬಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಜಿಂಕೆ ಮಾಂಸ, ಎರಡು ಮೊಬೈಲ್, ಒಂದು ಮಚ್ಚು ಒಂದು ಕತ್ತಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ವಲಯ ಉಪ ಅರಣ್ಯಾಧಿಕಾರಿ ಆರ್ ಸಾಲನ್, ಗಸ್ತು ಅರಣ್ಯ ಪಾಲಕರಾದ ಅನಿಲ್ ಕುಮಾರ್ ಗಣೇಶ್ ಕೆ.ಎನ್ ಅರಣ್ಯ ವೀಕ್ಷಕರಾದ ಪ್ರಭು.ವಿ ವಾಹನ ಚಾಲಕರಾದ ಮುಕುಂದವರ್ಮ, ರಾಜೇಶ್ ಹಾಗೂ ಪಿಲಾಕ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.












Click it and Unblock the Notifications