ಕೇರಳದಿಂದ ಕರ್ನಾಟಕಕ್ಕೆ ಕದ್ದುಮುಚ್ಚಿ ಕಸ ಹೊತ್ತು ತಂದ ಲಾರಿಗಳು ಲಾಕ್.! ಪ್ರತಿಭಟನಾಕಾರರ ಆಗ್ರಹವೇನು?
ಚಾಮರಾಜಗರ, ನವೆಂಬರ್, 04: ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಬಳಿ ಭಾನುವಾರ ಕೇರಳದಿಂದ ಅಕ್ರಮವಾಗಿ ಆಸ್ಪತ್ರೆ ಇತರೆ ತ್ಯಾಜ್ಯ ಸಾಗಣೆ ಮಾಡುತ್ತಿದ್ದ ಮೂರು ಲಾರಿಗಳನ್ನು ತಡೆಯಲಾಗಿದೆ. ಈ ಲಾರಿಗಳನ್ನು ನಮ್ಮ ಕರ್ನಾಟಕ ಸೇನೆ, ಜಯ ಕರ್ನಾಟಕ, ರೈತ ಸಂಘಟನೆ ಮತ್ತು ಮಾಡ್ರಹಳ್ಳಿ ಗ್ರಾಮಸ್ಥರು ತಡೆಯುವ ಮೂಲಕ ಆಕ್ರೋಶ ಹೊರಹಾಕಿದರು.
ಕೇರಳದಿಂದ ಆಸ್ಪತ್ರೆ ತ್ಯಾಜ್ಯ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಅರಿತ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಮಾಡ್ರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ 3 ಲಾರಿಗಳನ್ನು ತಡೆದರು.

ಮೂಲೆಹೊಳೆ, ಮದ್ದೂರು ಅರಣ್ಯ ಮತ್ತು ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ದಾಟಿ ಪಟ್ಟಣದ ಮೂಲಕವೇ ಲಾರಿಗಳು ಸಾಗಿರುವ ಹಿನ್ನೆಲೆ ಸ್ಥಳಕ್ಕೆ ಕರೆಸಲು ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆಯವರಿಗೆ ಕರೆ ಮಾಡಿದೆವು. ಎರಡು ಇಲಾಖೆ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಮೂಲೆಹೊಳೆ ಮತ್ತು ಮದ್ದೂರಿನಲ್ಲಿರುವ ಅರಣ್ಯ ಮತ್ತು ಪೊಲೀಸ್ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ದಾಟಿ ಅಕ್ರಮವಾಗಿ ತ್ಯಾಜ್ಯ ತುಂಬಿದ ಲಾರಿಗಳು ರಾಜ್ಯ ಪ್ರವೇಶಿಸುತ್ತಿವೆ. ತ್ಯಾಜ್ಯವನ್ನು ರಾಜ್ಯದ ವಿವಿಧ ಕಡೆಗಳಲ್ಲಿ ರಾತ್ರಿ ವೇಳೆ ಸುರಿಯಲಾಗುತ್ತಿದೆ. ಈ ಹಿನ್ನೆಲೆ ಲಾರಿ ಮಾಲೀಕ, ಚಾಲಕರ ಜೊತೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
5,000 ರೂಪಾಯಿ ದಂಡ: ಜಾಸ್ತಿ ಮೈಮೇಲೆ ಬಿಟ್ಟುಕೊಂಡ್ರೆ ತಲೆ ಮೇಲೆ ಕುಳಿತುಕೊಂಡುಬಿಡ್ತಾರೆನ್ನುವ ಮಾತಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಹೊರ ರಾಜ್ಯದವರದ್ದೇ ದರ್ಬಾರ್ ಆಗ್ಬಿಟ್ಟಿದೆ. ಆದ್ರೆ ಕನ್ನಡಿಗರು ಒಮ್ಮೆ ತಾಳ್ಮೆ ಕಳೆದುಕೊಂಡರೆ, ಮೆರೆಯುವವರ ಬುಡಕ್ಕೆ ಬೆಂಕಿ ಇಡುತ್ತಾರೆನ್ನುವುದು ತಿಳಿದಿರಬೇಕಾಗುತ್ತದೆ. ಇನ್ನು ಕೇರಳದಿಂದ ಕಸ ತಂದು ರಾಜ್ಯದಲ್ಲಿ ಸುರಿದ ಲಾರಿ ಚಾಲಕನಿಗೆ ಗುಂಡ್ಲುಪೇಟೆ ಪುರಸಭೆ ದಂಡ ವಿಧಿಸಿ, ಛೀಮಾರಿ ಇತ್ತೀಚೆಗಷ್ಟೇ ಹಾಕಿತ್ತು.
ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇರಳದಿಂದ ತಂದ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ವಾಹನ ಚಾಲಕನಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದರು.
ಈಚರ್ ವಾಹನ ಚಾಲಕ ಕೇರಳದಿಂದ ವಾಪಸ್ ಬರುವಾಗ ಬಾಳೆ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿಯಲ್ಲಿ ಸುರಿಯುತ್ತಿದ್ದನು. ಈ ವೇಳೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದು 5,000 ದಂಡ ವಿಧಿಸಿ, ಎಚ್ಚರಿಕೆ ಕೊಡಿಸಿಕೊಂಡು ಹೋಗಿದ್ದಾರೆ.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಆರೋಗ್ಯಾಧಿಕಾರಿ ಗೋಪಿ, ಪರಿಸರ ಅಧಿಕಾರಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಚೆಕ್ ಪೋಸ್ಟ್ ಇದ್ದರೂ ಕೂಡ ಅವರ ಕಣ್ತಪ್ಪಿಸಿ ಕಟ್ಟಡ ತ್ಯಾಜ್ಯ, ಬಾಳೆ ತ್ಯಾಜ್ಯ ತಂದು ಸುರಿಯುವಾಗ ಸಿಕ್ಕಿಬಿದ್ದು ದಂಡ ಪೀಕಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications