ಚಾಮರಾಜನಗರ: ವ್ಯಾಪಾರಿಗಳಿಂದ ಲಂಚ ಪಡೆಯುತ್ತಿದ್ದ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕಚೇರಿಯಿಂದ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಚಾಮರಾಜನಗರ, ಮಾರ್ಚ್ 4: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕಚೇರಿಯಿಂದ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲದ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು ಪರಾರಿಯಾದ ಅಧಿಕಾರಿ ಎಂದು ಗುರುತಿಸಲಾಗಿದೆ.
ಹನೂರು ತಾಲೂಕಿನ ರಾಮಾಪುರ ಗ್ರಾಮದ ಕಬ್ಬಿಣದ ಅಂಗಡಿ ವ್ಯಾಪಾರಿ ಲಕ್ಷ್ಮಣ್ ಇಲಾಖೆಯಿಂದ ಅನುಮತಿ ಪಡೆಯಲು ಅರ್ಜಿ ಹಾಕಿದ ವೇಳೆ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದರಲ್ಲಿ ಒಂದು ಸಾವಿರ ರೂಪಾಯಿ ಅಡ್ವಾನ್ಸ್ ಪಡೆದದ್ದರು ಎನ್ನಲಾಗಿದೆ. ಅದೇ ಗ್ರಾಮದ ಪೈಪ್ ಮತ್ತು ಇನ್ನಿತರ ವ್ಯಾಪಾರಿ ದಗ್ಲರಾಮ್ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯಲು ಹೋದ ವೇಳೆ 6 ಸಾವಿರ ರೂಪಾಯಿ ಲಂಚ ಕೇಳಿದ್ದು ಇದರಲ್ಲಿ 3 ರೂಪಾಯಿ ಸಾವಿರ ಮೊದಲೇ ಪಡೆದಿದ್ದರು ಎನ್ನಲಾಗಿದೆ.

ಇಬ್ಬರು ವ್ಯಾಪಾರಿಗಳು ಅಧಿಕಾರಿಯ ಲಂಚದಾಹದಿಂದ ಬೇಸತ್ತು ಲೋಕಾಯುಕ್ತರಿಗೆ ದೂರು ನೀಡಿದ್ದರು ಎನ್ನಲಾಗಿದೆ. ದೂರು ಪಡೆದ ಲೋಕಾಯುಕ್ತರು ಶುಕ್ರವಾರ ಸಂಜೆ ಅಧಿಕಾರಿ ಚಂದ್ರು ವ್ಯಾಪಾರಿಗಳ ಬಳಿ ಹಣ ಇಡುವಂತೆ ಹೇಳಿದ್ದಾನೆ. ಲಂಚದ ಹಣ ಇಟ್ಟ ಬಳಿಕ ಚಂದ್ರು ಹೊರ ಹೋಗಿದ್ದು ಮಧ್ಯವರ್ತಿ ಸಾಗರ್ ಎಂಬಾತ ಫೈಲ್ ನಿಂದ ಹಣ ತೆಗೆದುಕೊಂಡಿದ್ದಾನೆ. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅಧಿಕಾರಿ ಚಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ಲೋಕಾಯುಕ್ತ ಪೊಲೀಸರು ಮಧ್ಯವರ್ತಿ ಸಾಗರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಿಹಿ ತಿಂಡಿ ಎಂದು ಇರುವೆ ಪುಡಿ ತಿಂದು ಬಾಲಕ ಸಾವು
ಚಾಮರಾಜನಗರ: ಇರುವೆಗೆ ಸಿಂಪಡಿಸುವ ಇರುವೆ ನಾಶಕ ತಿಂದು 5 ವರ್ಷದ ಬಾಲಕ ಅಸುನೀಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪುಟ್ಟಿರಮ್ಮನ ದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಪುಟ್ಟಿರಮ್ಮನ ದೊಡ್ಡಿ ಗ್ರಾಮದ ಕ್ಯಾತೆ ಗೌಡ ಎನ್ನುವವರ 5 ವರ್ಷದ ಮಗ ಶಿವು ಸಾವನ್ನಪ್ಪಿದ ಬಾಲಕ ಎಂದು ಗುರುತಿಸಲಾಗಿದೆ.
ಕ್ಯಾತೆಗೌಡ ತಮ್ಮ ಮನೆಯ ಹಿತ್ತಲಿನ ಕಿಟಕಿಯಲ್ಲಿ ಇರುವೆಗೆ ಸಿಂಪಡಿಸುವ ಔಷಧಿಯನ್ನು ತಂದಿಟ್ಟಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ಶಿವು ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದಿದ್ದಾನೆ. ಇರುವೆ ಪುಡಿಯನ್ನು ತಿಂದು ನರಳಾಡುತ್ತಿತ್ತು ಇದನ್ನು ಗಮನಿಸಿದ ಪೋಷಕರು ತಕ್ಷಣ ಕಾಮಗೆರೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆಗೆ ಫಲಿಸದೆ ಮಗು ಸಾವನ್ನಪ್ಪಿದೆ.
ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications