ಹನೂರು: 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ, ಗಂಭೀರ ಗಾಯ
ಚಾಮರಾಜನಗರ, ಜೂನ್, 27: ಮನೆಯ ಮುಂಭಾಗ ಆಟವಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ 9 ಗಂಟೆಗೆ ನಡೆದಿದೆ.
ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಸುಶೀಲ (6) ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ರಾಮು ಹಾಗೂ ಲಲಿತಾರವರ ಪುತ್ರಿ ಸುಶೀಲ ಮನೆಯ ಮುಂಭಾಗ ಆಟವಾಡುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಮಗುವನ್ನು ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿದೆ.

ಚಿರತೆ ದಾಳಿಗೆ ಒಳಗಾಗಿದ್ದ ಮಗುವಿನ ಚಿರಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಯಾರೋ ಕಳ್ಳರು ಬಂದಿದ್ದಾರೆ, ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೊಣ್ಣೆಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆದರೆ ಗ್ರಾಮಸ್ಥರ ಸದ್ದಿಗೆ ಚಿರತೆ ಮಗುವನ್ನು ಬಿಟ್ಟು ಕಾಡಿನತ್ತ ತೆರಳಿದೆ. ಅಷ್ಟರಲ್ಲಾಗಲೇ ಚಿರತೆ ಮಗುವಿನ ರಕ್ತವನ್ನು ಕುಡಿದು ಗಾಯಗೊಳಿಸಿದೆ.
ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ 108 ಆಂಬುಲೆನ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಮೂರ್ತಿ ಹಾಗೂ ಚಾಲಕ ಲಿಂಗರಾಜು ಗಾಯಗೊಂಡ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಗೆ ಬಿಆರ್‌ಟಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಭು ಭೇಟಿ ನೀಡಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಶಾಲಾ ವಿದ್ಯಾರ್ಥಿ ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದ ಶಿಕ್ಷಕರುಗಳಾದ ಲೋಕೇಶ್ ಹಾಗೂ ಚಂದನ್ ಪೋಲಿ ಕ್ರಾಸ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.
3 ಚಿರತೆಗಳ ಸಾವು
ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದೇ ದಿನ 3 ಚಿರತೆ ಶವಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ ಒಂದು ಚಿರತೆ ಹಾಗೂ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆ ಶವ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿರಿಲ್ಲ.
ಏಕಾಏಕಿ ಚಿರತೆಗಳು ಸಾವನ್ನಪ್ಪಿರುವ ಕಣಿಯನಪುರ ಹಾಗೂ ಮಂಗಲ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದರು. ಕಣಿಯನಪುರದಲ್ಲಿ 5 ವರ್ಷದ ಗಂಡು ಚಿರತೆ ಮತ್ತು ಮಂಗಲ ಗ್ರಾಮದಲ್ಲಿ 2.5 ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications