ಚಿರತೆ ದಾಳಿ: ಯಳಂದೂರಿನಲ್ಲಿ 9 ವರ್ಷದ ಬಾಲಕನಿಗೆ ಗಂಭೀರ ಗಾಯ
ಚಾಮರಾಜನಗರ, ಜುಲೈ, 26: ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಮತ್ತೇ ಇದೀಗ ಈ ಘಟನೆ ಮಾಸುವ ಮುನ್ನವೇ ಚಿರತೆ ಮತ್ತೊಬ್ಬ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್ (09) ದಾಳಿಗೊಳಗಾದ ಬಾಲಕ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು, ಇದನ್ನು ಕಂಡ ಜನರು ಚೀರಾಟಿ ಕೂಗಾಡಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿಹೋಗಿದೆ.

ಇನ್ನು ಹರ್ಷಿತ್‌ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿದೆ. ಬಳಿಕ ಯಳಂದೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
4 ದಿನಗಳಿಂದ ಓಡಾಟ ನಡೆಸಿದ್ದ ಚಿರತೆ
ಕಳೆದ ಮೂರು ದಿನಗಳಿಂದ ಯಳಂದೂರು ತಾಲೂಕಿನ ಕೆಸ್ತೂರು, ಮಲ್ಲಿಗಹಳ್ಳಿ, ಕಟ್ನವಾಡಿ, ಹೊಸೂರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮಲ್ಲಿಗೆಹಳ್ಳಿ ಸೇರಿದಂತೆ 6 ಕಡೆ ಬೋನುಗಳನ್ನುಇಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಆದರೆ, ಚಿರತೆ ಸೆರೆಯಾಗದೇ ಇದೀಗ ಬಾಲಕನ ಮೇಲೆ ಎರಗಿದ ಆತಂಕಕಾರಿ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ನಂತರ ಬಾಲಕಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಅಸುನೀಗಿದ್ದಳು.












Click it and Unblock the Notifications