• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಸ್‌ಪಿ ಕಾರ್ಯಕರ್ತರ ಮೇಲೆ ಹಲ್ಲೆ: ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬೆಂಬಲಿಗರ ಬಂಧನ

|

ಚಾಮರಾಜನಗರ, ಡಿಸೆಂಬರ್ 5: ಬಿಎಸ್‌ಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರ ಇಬ್ಬರು ಬೆಂಬಲಿಗರನ್ನು ಶನಿವಾರ ಬಂಧಿಸಲಾಗಿದೆ. ನಾಸೀರ್ ಷರೀಫ್ ಮತ್ತು ಜಕಾವುಲ್ಲಾ ಬಂಧಿತ ಆರೋಪಿಗಳು.

ಬಿಎಸ್‌ಪಿಯ ಮೂವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಎಸ್‌ಪಿ ಮುಖಂಡರಾದ ರಾಜಶೇಖರ ಮೂರ್ತಿ, ಚೈನಾರಾಂ ಕಾಪಡಿ, ರಂಗಸ್ವಾಮಿ ಮತ್ತು ಹನುಮಂತು ಅವರು ಶಾಸಕ ಎನ್ ಮಹೇಶ್ ವಿರುದ್ಧ ಡಿ. 2ರಂದು ಸುದ್ದಿಗೋಷ್ಠಿ ನಡೆಸಿ ಹಲವು ಆರೋಪಗಳನ್ನು ಮಾಡಿದ್ದರು. ಇದರಿಂದ ಶಾಸಕರ ಬೆಂಬಲಿಗರಾದ ನಾಸಿರ್ ಷರೀಫ್ ಮತ್ತು ಜಕಾವುಲ್ಲಾ ಕುಪಿತರಾಗಿದ್ದರು. ಅದೇ ದಿನ ಸಂಜೆ ರಾಘವೇಂದ್ರ ಬ್ಯಾಂಕರ್ಸ್ ಅಂಗಡಿಯಲ್ಲಿ ಚೈನಾರಾಂ ಕಾಪಡಿ, ರಂಗಸ್ವಾಮಿ ಮತ್ತು ಹನುಮಂತು ಅವರ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ್ದರು ಎನ್ನಲಾಗಿದೆ.

ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಹನುಮಂತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಿಜೆಪಿ ಸೇರಲಿದ್ದಾರೆ ಬಿಎಸ್‌ಪಿ ಶಾಸಕ ಎನ್. ಮಹೇಶ್?

ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಅವರ ಪತ್ತೆಗೆ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳಲ್ಲಿ ಒಬ್ಬರಾದ ನಾಸಿರ್ ಷರೀಫ್ ಕೊಳ್ಳೇಗಾಲ ನಗರಸಭೆಯ ಬಿಎಸ್‌ಪಿ ಸದಸ್ಯರೂ ಆಗಿದ್ದಾರೆ. ಎನ್. ಮಹೇಶ್ ಅವರು ಬಿಎಸ್‌ಪಿಯ ಶಾಸಕರಾಗಿದ್ದರೂ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅವರ ಬೆಂಬಲಿಗರಾದ ನಾಸಿರ್ ಕೂಡ ಪಕ್ಷದಿಂದ ದೂರವಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎನ್ ಮಹೇಶ್ ಅವರನ್ನು ವಿಶ್ವಾಸಮತ ಯಾಚನೆಯ ದಿನ ಗೈರಾಗಿದ್ದರಿಂದ ಬಿಎಸ್‌ಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಈಗ ಅವರು ಬಿಜೆಪಿ ಸೇರ್ಪಡೆಯಾಗಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸಂಕ್ರಾಂತಿ ಬಳಿಕ ಅವರು ಬಿಜೆಪಿ ಸೇರಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.

English summary
Kollegal Police on Saturday arrested two supporters of MLA N Mahesh in an assault case on BSP workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X