ಗೋವಿಂದರಾಜನಗರದಲ್ಲಿ ಸೋಲುತ್ತೇನೆ ಅಂತಾ ಚಾಮರಾಜನಗರಕ್ಕೆ ಬಂದಿಲ್ಲ, ಆ ಕೆಲಸವನ್ನು ನನ್ನ ಎಕ್ಡನೂ ಮಾಡಲ್ಲ: ವಿ.ಸೋಮಣ್ಣ
ಚಾಮರಾಜನಗರ, ಏಪ್ರಿಲ್, 14: ಗೋವಿಂದರಾಜನಗರದಲ್ಲಿ ಸೋಲುತ್ತೇನೆ ಅಂತಾ ಚಾಮರಾಜನಗರಕ್ಕೆ ಬಂದಿಲ್ಲ. ಆ ಕೆಲಸನಾ ನನ್ನ ಎಕ್ಡನೂ ಮಾಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿಕಾರಿದರು.
ಬಿಜೆಪಿ ಟಿಕೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ ವಿ.ಸೋಮಣ್ಣ, ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಅವರು ಮಾತನಾಡಿ, ಗೋವಿಂದರಾಜನಗರದಲ್ಲಿ ಸೋಲುತ್ತೇನೆ ಅಂತಾ ಸೋಮಣ್ಣ ಇಲ್ಲಿಗೆ ಬಂದಿದ್ದಾರೆ ಅಂತೆಲ್ಲಾ ಕೆಲವರು ಹೇಳುತ್ತಾರೆ. ಆದರೆ ಆ ಕೆಲಸವನ್ನು ನನ್ನ ಎಕ್ಡನೂ ಮಾಡುವುದಿಲ್ಲ. ಬೆಂಗಳೂರಿನಲ್ಲಿ 5-6 ಕ್ಷೇತ್ರ ಗೆಲ್ಲಿಸುವ ಸಾಮರ್ಥ್ಯ ನನಗಿದೆ ಎಂದರು.

ನಾನು ಜಾತ್ಯಾತೀತ ನಾಯಕ
ನನಗೆ ಇದು ಬಯಸದೇ ಬಂದ ಭಾಗ್ಯ ಅಂತಲ್ಲಾ, ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟು ಈ ಕೆಲಸವನ್ನು ಕೊಟ್ಟಿದೆ. ನಾನೋರ್ವ ಜಾತ್ಯಾತೀತ ನಾಯಕ, ಸಿದ್ದರಾಮಯ್ಯನವರನ್ನು ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ. ವರುಣದಲ್ಲಿ ನನ್ನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ತಕಥೈ ಅಂಥಾ ಕುಣಿತ್ತಿದ್ದಾರೆ, ಚಾಮರಾಜನಗರಕ್ಕೆ ಏನಾಗಿದೆ. ಪುಟ್ ಬಾಲ್, ವಾಲಿಬಾಲ್, ಗೋಲಿ ಎಲ್ಲಾ ಆಡುತ್ತಿದ್ದೀರಾ ಎಂದು ಬಂಡಾಯ ಸಾರಿದ್ಧವರಿಗೆ ನಯವಾಗಿ ಚೇಡಿಸಿದರು.
ಜಿಲ್ಲೆ ಘೋಷಣೆ ಆಗಿದ್ದಾಗಿನಿಂದ ಈಗಲೂ ಚಾಮರಾಜನಗರ ಹಾಗೇ ಇದೆ. ಇದರ ಸಮಗ್ರ ಅಭಿವೃದ್ಧಿಯನ್ನು ಸೋಮಣ್ಣ ಮಾಡುತ್ತಾನೆ. ಬಳಿಕ ನಿಮ್ಮ ಸೇವಕನಾಗಿರುತ್ತೇನೆ. ಹೀಗೆ ಮೋದಿ ಕಾರ್ಯಕ್ರಮದ ಮೇಲೆ ನಂಬಿಕೆ ಇದ್ದರೇ ನನ್ನನ್ನು ಬೆಂಬಲಿಸುವ ಮೂಲಕ ಜನರ ಬಳಿ ತೆರಳಿ ಮತಯಾಚನೆ ಮಾಡಿ ಎಂದು ಮನವಿ ಮಾಡಿದರು.
ಬಂಡಾಯ ಶಮನಕ್ಕೆ ಮುಂದಾದ ವಿ.ಸೋಮಣ್ಣ
ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದೀಗ ಟಿಕೆಟ್ ಸಿಗದವರು ಬಂಡಾಯ ಎದ್ದಿದ್ದಾರೆ. ಆದ್ದರಿಂದ ಬಂಡಾಯಕ್ಕೆ ಮುಲಾಮು ಹಚ್ಚಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಟಿಕೆಟ್ ಘೋಷಣೆಯಾದ ಬಳಿಕ ಸ್ಫೋಟಗೊಂಡಿದ್ದ ಬಂಡಾಯಕ್ಕೆ ಬಿಜೆಪಿ ಮುಲಾಮು ಹಚ್ಚುವ ಕೆಲಸಕ್ಕೆ ಮುಂದಾಗಿದ್ದು, ಟಿಕೆಟ್ ವಂಚಿತರ ಮನೆಗೆ ನಾಯಕರು ಪರೇಡ್ ಆರಂಭಿಸಿದ್ದಾರೆ. ಚಾಮರಾಜನಗರ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಶ್ರೀ ಪ್ರತಾಪ್ ಮತ್ತು ಅವರ ಬೆಂಬಲಿಗರು ಟಿಕೆಟ್ ಘೋಷಣೆಯಾದ ಬಳಿಕ ಕೆರಳಿ ಕೆಂಡವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಚಾಮರಾಜನಗರ ಜಿಲ್ಲಾ ಚುನಾವಣಾ ಉಸ್ತುವಾರಿ ಹೊತ್ತಿರುವ ಬಿಹಾರದ ಎಂಎಲ್‌ಸಿ ಜೈಸ್ವಾಲ್, ಮಾಜಿ ಎಂಪಿ ಕೋಟೆ ಶಿವಣ್ಣ ನಾಗಶ್ರೀ ಪ್ರತಾಪ್ ಅವರ ಮನೆಗೆ ಭೇಟಿಕೊಟ್ಟು ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ಇನ್ನು, ಬಂಡಾಯ ಶಮನದ ಸಭೆಯಲ್ಲಿ ನಾಗಶ್ರೀ ಪ್ರತಾಪ್, ರಾಮಚಂದ್ರು ಮತ್ತು ಅವರ ಬೆಂಬಲಿಗರು ಭಾಗಿ ಆಗಿದ್ದರು.
ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಗುರುವಾರ (ಏಪ್ರಿಲ್ 14) ಚಾಮರಾಜನಗರದಲ್ಲಿ ಸಭೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಸಭೆಯಲ್ಲಿ ನಾಗಶ್ರೀ ಪ್ರತಾಪ್ ಅವರ ಸಾವಿರಾರು ಬೆಂಬಲಿಗರು ಭಾಗಿ ಆಗಿದ್ದರು. ಈ ವೇಳೆ ಅವರು ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜೊತೆಗೆ ವಿ.ಸೋಮಣ್ಣ ಅವರ ವಿರುದ್ಧವೂ ಕೆಲವರು ಬೆಂಬಲಿಗರು ಕಿಡಿಕಾರಿದರು.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಹಣಕಾಸಿನ ಬಗ್ಗೆ ಚಿಂತಿಸಬೇಡಿ, ಜನರೇ ತಮ್ಮ ಕೈಲಾದಷ್ಟು ಸಹಾಯ ಮಾಡಿ ಗೆಲ್ಲಿಸುತ್ತಾರೆ. ಈ ಹಿಂದೆ ವಾಟಾಳ್ ನಾಗರಾಜ್ ಅವರೂ ಕೂಡ ಪಕ್ಷೇರವಾಗಿ ನಿಂತು ಗೆದ್ದಿರುವ ನಿದರ್ಶನ ಇರುವುದರಿಂದ ಬೆಂಬಲಿಗರೇ ಸವಾಲಾಗಿ ಸ್ವೀಕರಿಸಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಘೋಷಿಸಿದರು.












Click it and Unblock the Notifications