ಚಾಮರಾಜನಗರ ಜಿಲ್ಲೆಯ ಕ್ಷೇತ್ರವಾರು ಮತದಾರರ ಸಂಪೂರ್ಣ ವಿವರ
ಚಾಮರಾಜನಗರ, ಮಾರ್ಚ್ 29: ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಹಾಗೂ ನೀತಿ ಸಂಹಿತೆ ಇಂದಿನಿಂದ( ಮಾರ್ಚ್ 29)ರಿಂದ ಜಾರಿಯಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
2018 ರ ಚುನಾವಣೆಯಲ್ಲಿ 976 ಇದ್ದ ಮತಗಟ್ಟೆಗಳ ಸಂಖ್ಯೆ ಈ ಬಾರಿ 982ಕ್ಕೆ ಏರಿದೆ. ಇವುಗಳಲ್ಲಿ ಹನೂರಿನಲ್ಲಿ 253 ಮತಗಟ್ಟೆ, ಕೊಳ್ಳೇಗಾಲದಲ್ಲಿ241 ಚಾಮರಾಜನಗರದಲ್ಲಿ 239 ಹಾಗೂ ಗುಂಡ್ಲುಪೇಟೆಯಲ್ಲಿ ಒಟ್ಟು 249 ಮತಗಟ್ಟೆಗಳು ಸ್ಥಾಪನೆಯಾಗಲಿದೆ ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದರು.

ಮಾತು ಮುಂದುವರಿಸಿದ ಅವರು, ಜಿಲ್ಲೆಯಲ್ಲಿ 195 ಮಂದಿ ಸೇವಾ ಮತದಾರರು ಇದ್ದು 97 ಸೆಕ್ಟರ್ ಅಧಿಕಾರಿಗಳು, 12 ಪ್ಲೈಯಿಂಗ್ ಸ್ಕ್ವಾಡ್ ತಂಡ,16 ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ, ಮಾದರಿ ನೀತಿ ಸಂಹಿತೆ ಪಾಲನೆ ಮೇಲೆ ನಿಗಾ ಇಡುವ ಉದ್ದೇಶದಿಂದ 37 ಮಂದಿ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಸ್‌ಪಿ ಪದ್ಮಿನಿ ಸಾಹೊ ಮಾತನಾಡಿ, ವಾಹನಗಳ ಅಕ್ರಮ ವಹಿವಾಟು ಮತ್ತು ನೀತಿ ಸಂಹಿತೆ ಉಲ್ಲಂಘನೆ ಚಟುವಟಿಕೆ ತಡೆಯುವ ಉದ್ದೇಶದಿಂದ 11 ಅಂತರಾಜ್ಯ ಚೆಕ್ ಪೋಸ್ಟ್ 8 ಅಂತರ್ಜಿಲ್ಲಾ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. 3 ಪಾಳಿಯಲ್ಲಿ 24*7 ಸಿಬ್ಬಂದಿ ಕರ್ತವ್ಯ ನಿರ್ವಹಿಸುವವರು ಜೊತೆಗೆ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಮತದಾರರ ವಿವರ
ಹನೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದೆ. ಹನೂರಿನಲ್ಲಿ ಪುರುಷ ಮತದಾರರು 1,10,797 ಇದ್ದು ಮಹಿಳಾ ಮತದಾರರು 1,08,387 ರಷ್ಟಿದ್ದಾರೆ. ಉಳಿದಂತೆ, ಕೊಳ್ಳೇಗಾಲದಲ್ಲಿ 1,06,235 ಪುರುಷರು- 1,08,909 ಮಹಿಳೆಯರು, ಚಾಮರಾಜನಗರದಲ್ಲಿ ಪುರುಷರು-1,01,744 ಮಹಿಳೆಯರು1,06,012, ಗುಂಡ್ಲುಪೇಟೆ ಕ್ಷೇತ್ರದಲ್ಲಿ 1,04,187 ಪುರುಷ ಮತದಾರರು ಇದ್ದು 1,07,918 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 4,22,963 ಪುರುಷ ಮತದಾರರು 4,31,226 ಮಹಿಳಾ ಮತದಾರರು , 68 ತೃತೀಯ ಲಿಂಗಿ ಮತದಾರರು ಇದ್ದಾರೆ.
12 ಸಾವಿರದಷ್ಟು ಹೊಸ ಮತದಾರರು ಜಿಲ್ಲೆಯಲ್ಲಿದ್ದು, ವಿಶೇಷಚೇತನ ಮತದಾರರು 11,965 , 80 ವರ್ಷ ದಾಟಿರುವ ಮತದಾರರು 23,300 ರಷ್ಟು ಜಿಲ್ಲೆಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ, ಮೇ 13 ಮತ ಎಣಿಕೆ
ಇನ್ನು ಬುಧವಾರ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದೆ. ರಾಜ್ಯದಲ್ಲಿ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಅಧಿಸೂಚನೆ, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ಹೀಗಾಗಿ ಕರ್ನಾಟಕ ಚುನಾವಣೆಯ ಕಣ ಇನ್ನಷ್ಟು ರಂಗೇರಿದೆ.












Click it and Unblock the Notifications