ಕೋಟಿ ಮಂದಿ ಉದಯನಿಧಿಯಂಥವರು ಹುಟ್ಟಿದ್ರೂ ಹಿಂದೂ ಧರ್ಮವನ್ನು ಅಳಿಸಲಾಗಲ್ಲ: ಚಾಮರಾಜನಗರದಲ್ಲಿ ಭುಗಿಲೆದ್ದ ಆಕ್ರೊಶ
ಚಾಮರಾಜನಗರ, ಸೆಪ್ಟೆಂಬರ್, 04: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಅವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಗ್ರಹಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಸನಾತನ ಧರ್ಮ ಕೊರೊನಾ, ಡೆಂಘಿ ಇದ್ದಂತೆ ಎಂದು ಹೇಳಿಕೆ ಕೊಟ್ಟಿರುವುದು ಖಂಡನೀಯ. ಸನಾತನ ಧರ್ಮ ಎಂದರೆ ನಿನ್ನೆ- ಮೊನ್ನೆ ಹುಟ್ಟಿದ್ದಲ್ಲ. ಉದಯನಿಧಿ ಅಂತಹವರು ಕೋಟಿ ಮಂದಿ ಹುಟ್ಟಿದರೂ ಹಿಂದೂ ಧರ್ಮವನ್ನು ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಎಲ್ಲಾ ಧರ್ಮಗಳಿಗೂ ಅದರದ್ದೇ ಆಗ ಗೌರವವಿದೆ, ಎಲ್ಲಾ ಧರ್ಮವನ್ನು ಗೌರವಯುತವಾಗಿ ಕಾಣಬೇಕು. ಎಲ್ಲಾ ಧರ್ಮವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಆ ಧರ್ಮ ಸರಿಯಿಲ್ಲ- ಈ ಧರ್ಮ ಸರಿಯಿಲ್ಲ ಎನ್ನುವುದು ಸರಿಯಲ್ಲ. ಕೂಡಲೇ ಉದಯನಿಧಿ ಬಂಧಿಸಿ, ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಹೆಚ್.ಸಿ.ಮಹದೇವಪ್ಪ ಹೇಳಿದ್ದೇನು?
ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಇದು ಕೊರೊನಾ, ಡೆಂಗ್ಯೂ ಹಾಗೂ ಮಲೇರಿಯಾಕ್ಕೆ ಸಮಾನವಾದುದು ಎಂಬ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಹೇಳಿಕೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ ಸಮರ್ಥಿಸಿಕೊಂಡಿದ್ದು, ಧರ್ಮ ಶುದ್ಧೀಕರಣವಾಗಬೇಕು ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ಧರ್ಮ ಬೇಡ ಎಂದು ಹೇಳಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಬೇಕು. ಮನುಷ್ಯನಿಗೆ ಮಾನವೀಯತೆ ಮುಖ್ಯ. ಯಾವ ಧರ್ಮವೂ ಮೇಲಲ್ಲ, ಕೀಳಲ್ಲ. ಸಂವಿಧಾನದ ಪ್ರಕಾರವೇ ಧರ್ಮ ಇರಬೇಕು. ಯಾವ ಧರ್ಮ ನ್ಯಾಯ, ಸಮಾನತೆ ಬೋಧಿಸುವುದಿಲ್ಲವೋ ಅದನ್ನು ಧರ್ಮ ಎಂದು ಕರೆಯಿಸಿಕೊಳ್ಳುವ ಯೋಗ್ಯತೆ ಇರುವುದಿಲ್ಲ. ಅದು ಯಾವ ಧರ್ಮವಾದರೂ ಸರಿ ಎಂದು ಹೇಳಿದರು.
ಸಂವಿಧಾನ ಪೀಠಿಕೆಯಲ್ಲಿ ಸಮಾನತೆ, ಸ್ವಾತಂತ್ರ್ಯ ನ್ಯಾಯ, ಎಲ್ಲರೂ ಒಂದೇ ಎಂದಿದೆ. ಎಲ್ಲರೂ ಮುಕ್ತವಾಗುವಿರುವುದು. ಇನ್ನೊಬ್ಬರಿಗೆ ಧಕ್ಕೆ ಆಗಬಾರದು. ಅಮವಾಸ್ಯೆಗೆ ಮಹಾದೇಶ್ವರ ದೇವರು ಸೇರಿದಂತೆ ಇತರೆ ದೇವಸ್ಥಾನಗಳ ಕೆರೆಗೆ ಹೋಗುತ್ತಾರೆ. ಅಲ್ಲಿ ದೇವರು ಇರುವುದಿಲ್ಲ, ಕಲ್ಲು ತೆಗೆದು ನೀರಿನಲ್ಲಿ ತೊಳೆದು ವಿಭೂತಿ, ಬಿಲ್ವಾ ಪತ್ರೆ ಹಾಕಿ ಪೂಜೆ ಮಾಡಿದರೆ ಕಲುಷಿತವಾಗಿರುವ ನೀರು ಶುದ್ಧೀಕರಣವಾಗುತ್ತದೆಯಾ? ಎಲ್ಲವೂ ಸರಿ ಹೋಗುತ್ತದೆಯೋ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅವರು ಮನುವಾದವನ್ನು ಸುಟ್ಟು ಹಾಕಿದ್ದರು. ಯಾವ ಧರ್ಮವೂ ದೊಡ್ಡದಲ್ಲ, ಯಾವ ಧರ್ಮವೂ ಸಣ್ಣದ್ದಲ್ಲ. ಮಾನವೀಯತೆ, ಸಮಾನತೆ, ಸಾಮಾಜಿಕ ನ್ಯಾಯ ಅಗತ್ಯ ಎಂದು ಪ್ರತಿಪಾದಿಸಿದರು. ಇನ್ನು ಒಂದು ದೇಶ, ಒಂದು ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತದೆ. ಒಂದು ವರ್ಷಕ್ಕೆ ಚುನಾವಣೆಗೆ ಹೋಗಬೇಕಾ? ಇದು ಯಾವ ರೀತಿಯ ರಾಜಕೀಯ ಎಂದು ಹೇಳಿದರು.
ನೂರು ವರ್ಷಗಳಿಂದಲೂ ಕಾವೇರಿ ವಿವಾದ ಇದೆ. ಬರ ಪರಿಸ್ಥಿತಿ ಬಂದಾಗ, ಡ್ಯಾಂನಲ್ಲಿ ನೀರು ಸಂಗ್ರಹವಾಗದಿರುವಾಗ ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಉಲ್ಲೇಖವಿಲ್ಲ. ಇದರಿಂದಾಗಿ ಬರ ಬಂದಾಗ ಸಮಸ್ಯೆ ಆಗುತ್ತಲೇ ಇದೆ. ಡ್ಯಾಂನಲ್ಲಿ ನೀರಿಲ್ಲ. ನಮ್ಮ ರೈತರಿಗೆ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ನೀರು ಇಲ್ಲದ ಮೇಲೆ ಹೇಗೆ ಕೊಡುವುದು. ರೈತರಲ್ಲಿ ಆತಂಕ ಇದೆ. ನಾವು ರೈತರನ್ನು ರಕ್ಷಣೆ ಮಾಡುತ್ತೇವೆ ಎಂದರು.












Click it and Unblock the Notifications