ಕಾಡಿನಿಂದ ಕರೆತಂದವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ, ಇದೆಂಥ ಶಿಕ್ಷೆ?

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ 19: ಬಂಡೀಪುರ ಅರಣ್ಯದಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಜೇನುಕುರುಬರನ್ನು ಸ್ಥಳಾಂತರಿಸಿದ ಬಳಿಕ ನೀಡಬೇಕಾದ ಸೌಲಭ್ಯವನ್ನು ನೀಡಿದ್ದರೆ ಬಹುಶಃ ಅವರು ಇವತ್ತು ನಿಕೃಷ್ಟ ಬದುಕನ್ನು ಕಟ್ಟಿಕೊಳ್ಳಬೇಕಾದ ಸ್ಥಿತಿ ಬರುತ್ತಿರಲಿಲ್ಲವೇನೋ?! ಇಂಥ ಭಾವನೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿಯಿರುವ ಜೇನುಕುರುಬ ಹಾಗೂ ಕಾಡುಕುರುಬರ ಕಾಲೋನಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕಾಡುತ್ತದೆ.

ಕಟ್ಟಿಕೊಟ್ಟ ಮನೆಗಳು ಶಿಥಿಲವಾಗುತ್ತಿವೆ, ವಿದ್ಯುತ್ ದೀಪಗಳು ಉರಿಯುತ್ತಿಲ್ಲ, ಚರಂಡಿಗಳಲ್ಲಿ ನೀರು ಹರಿಯುತ್ತಿಲ್ಲ, ಕುಡಿಯಲು ನೀರೇ ಇಲ್ಲ, ರಸ್ತೆಯಂತು ಇಲ್ಲವೇ ಇಲ್ಲ.. ಕಾಡಿನಿಂದ ಬಂದು ನಾಡಿನಲ್ಲಿ ಬದುಕು ಕಟ್ಟಿಕೊಂಡವರು ಅತ್ತ ಕಾಡಿನ ಬದುಕೂ ಇಲ್ಲದೆ, ಇತ್ತ ನಾಡಿನ ಬದುಕಿಗೂ ಹೊಂದಿಕೊಳ್ಳಲಾಗದೆ ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ.[ಗುಂಡ್ಲುಪೇಟೆ ಶಾಲೆ ಕಟ್ಟಡ ಉದ್ಘಾಟನೆ ಮುನ್ನವೇ ಕುಡುಕರಿಗೆ ಅರ್ಪಣೆ!]

Jenu, Kadu Kuruba colony people frustrated with poor infrastructure

ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಹುಲಿ ಯೋಜನೆಗೆ ಸೇರಿಸಿ ಸಂರಕ್ಷಿತ ಪ್ರದೇಶ ಎಂದು 1973ರಲ್ಲಿ ಘೋಷಿಸಿದ ಸಂದರ್ಭದಲ್ಲಿ ಅರಣ್ಯದ ನಡುವೆ ಹಾಡಿಗಳಲ್ಲಿ ವಾಸಿಸುತ್ತಿದ್ದ 100ಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳನ್ನು ಸಮೀಪದ ಉದ್ಯಾನದ ಗೇಟ್ ಗೆ ಹೊಂದಿಕೊಂಡಿರುವ ಮೇಲುಕಾಮನಹಳ್ಳಿ ಬಳಿ ಸಣ್ಣ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಸ್ಥಳಾಂತರಿಸಲಾಯಿತು.

ಪ್ರತಿ ಕುಟುಂಬಕ್ಕೆ 2 ಎಕರೆ ಭೂಮಿಯನ್ನು ನೀಡಲಾಯಿತಾದರೂ ಅದರಲ್ಲಿ ಯಾವ ರೀತಿ ಕೃಷಿ ಮಾಡಬೇಕು? ಹೇಗೆ ಜೀವನ ನಿರ್ವಹಿಸಬೇಕು ಎಂಬ ಬಗ್ಗೆ ಅರಿವು ಮೂಡಿಸದ ಕಾರಣದಿಂದಾಗಿ ಅವರು ಅದರತ್ತ ಗಮನ ನೀಡಲಿಲ್ಲ. ಸಂಬಂಧಿಸಿದವರು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈ ಎಲ್ಲ ಕಾರಣದಿಂದ ಅವರ ಬದುಕು ಅತಂತ್ರವಾಯಿತು.[ಯುಟಿ ಖಾದರ್ ಗೆ ಒಲಿದ ಚಾಮರಾಜನಗರ ಉಸ್ತುವಾರಿ ಪಟ್ಟ]

ಇತ್ತೀಚೆಗೆ ಇವರಿಗೆ 1.75 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರವು ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಅದು ಕಳಪೆ ಗುಣಮಟ್ಟದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ನೋಡಿದರೆ ಎಂತಹವರಿಗೂ ಇದರಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ತೀರಾ ಇಕ್ಕಟ್ಟಾದ ಕೊಠಡಿಗಳಲ್ಲಿ ಜೀವನ ಸಾಗಿಸುವುದು ಕಷ್ಟವಾಗಿ ಪರಿಣಮಿಸಿದೆ.

ಕಾಲೋನಿಗೆ ಭೂಸೇನಾ ನಿಗಮವು ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಿದ್ದರೂ ಕಳಪೆ ಕಾಮಗಾರಿಯಿಂದ ಚರಂಡಿಗಳು ಕುಸಿಯುತ್ತಿವೆ. ಇಡೀ ಕಾಲೋನಿಗೆ ಒಂದೇ ಕೊಳವೆ ಬಾವಿಯಿದ್ದು ಇದನ್ನೇ ಆಶ್ರಯಿಸುವಂತಾಗಿದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಬಾರದ ಕಾರಣ ಮಹಿಳೆಯರಿಗೆ ನೀರಿನದ್ದೇ ಚಿಂತೆಯಾಗಿದೆ.

ಸುತ್ತಮುತ್ತಲಿನ ಖಾಸಗಿ ವ್ಯಕ್ತಿಗಳ ಬಳಿ ತೆರಳಿ, ಕಾಡಿ-ಬೇಡಿ ನೀರು ತರಬೇಕಾಗಿದೆ. ದಿನಪೂರ್ತಿ ನೀರಿಗಾಗಿ ಅಲೆದಾಡುವುದು ಇವರ ಕೆಲಸವಾಗಿದೆ. ನಮಗೆ ನೀರಿನ ವ್ಯವಸ್ಥೆ ಕಲ್ಪಿಸಿ, ಪುಣ್ಯ ಕಟ್ಟಿಕೊಳ್ಳಿ ಎನ್ನುವುದು ಇವರ ಅಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People of Jenu, Kadu Kuruba colony in Gundlupet taluk, Chamarajanagar frustrated with poor infrastructure. They shifted here, when Bandipur selected for Tiger project (1973).
Please Wait while comments are loading...