Karnataka Rain: ಬಿಸಿಲಿಗೆ ಬೋರಲಾಗಿದ್ದ ಬಂಡೀಪುರ ಅರಣ್ಯಕ್ಕೀಗ ಜೀವಕಳೆ
ಚಾಮರಾಜನಗರ, ಮೇ 18: ಜಿಲ್ಲೆಯಲ್ಲಿ ಮಳೆ ಸುರಿದ ಪರಿಣಾಮ ಬಿಸಿಲಿಗೆ ಬೋರಲಾಗಿದ್ದ ಬಂಡೀಪುರ ಅರಣ್ಯ ಚೇತರಿಸಿಕೊಂಡಿದ್ದು, ಹಸಿರಿನ ಜೀವಕಳೆ ಬಂದಿದೆ. ಈಗ ಹಸಿರು ಹಚ್ಚಡದ ಅರಣ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬದೂಟವಾಗುತ್ತಿದೆ. ಇನ್ನೊಂದೆಡೆ ಅರಣ್ಯ ವ್ಯಾಪ್ತಿಯಲ್ಲಿ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದ್ದು, ವನ್ಯ ಪ್ರಾಣಿಗಳು ನೆಮ್ಮದಿಯಾಗಿ, ಖುಷಿಯಾಗಿ ವಿಹರಿಸುತ್ತಿವೆ.
ಬೇಸಿಗೆಯಲ್ಲಿ ನೀರು ಮೇವು ಅರಸಿಕೊಂಡು ಅಲೆದಾಡುತ್ತಿದ್ದ ಪ್ರಾಣಿಗಳು ಈಗ ಮತ್ತೆ ಸ್ವಸ್ಥಾನಗಳಿಗೆ ಮರಳಲು ಆರಂಭಿಸಿದ್ದು ದಾರಿಯಲ್ಲಿ ಜಿಂಕೆ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನವಾಗುತ್ತಿವೆ. ಜಿಂಕೆಗಳಂತೂ ಕುಣಿದು ಕುಪ್ಪಳಿಸುವ ದೃಶ್ಯಗಳಂತು ಸಾಮಾನ್ಯವಾಗಿದ್ದು ನೋಡುಗರ ಗಮನಸೆಳೆಯುತ್ತಿದೆ. ಈ ಬಾರಿಯಂತು ಬೇಸಿಗೆಯ ಬಿಸಿಲಿಗೆ ಇಡೀ ಅರಣ್ಯ ಬೋರಲಾಗಿ ಬಿದ್ದಿತ್ತು. ಹೀಗಾಗಿ ಅರಣ್ಯವನ್ನು ನೋಡಿದವರು ಮರುಕ ಪಡುವಂತಾಗಿತ್ತು.

ಆದರೆ ಬೇಸಿಗೆಯಲ್ಲಿ ಕಟ್ಟು ನಿಟ್ಟಿನ ಕ್ರಮದ ಜತೆಗೆ ನಿಗಾ ವಹಿಸಿದ ಪರಿಣಾಮ ಕಾಡ್ಗಿಚ್ಚು ಸಂಭವಿಸಿರಲಿಲ್ಲ. ಕೆಲವು ಕಡೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದನ್ನು ಹೊರತು ಪಡಿಸಿದರೆ ದೊಡ್ಡಮಟ್ಟದ ದುರಂತಗಳು ಸಂಭವಿಸಿರಲಿಲ್ಲ. ಆದರೆ ಬಿಸಿಲಿನ ಧಗೆಯಿಂದಾಗಿ ಕುರುಚಲು ಗಿಡಗಳು ಒಣಗಿದ್ದರೆ, ಗಿಡಮರಗಳು ಬೋರಲು ಬಿದ್ದಿದ್ದವು. ಈಗ ಮಳೆ ಬಿದ್ದ ಕಾರಣ ಮತ್ತೆ ಚಿಗುರು ಕಾಣಿಸಿಕೊಂಡಿದ್ದು, ಇದೇ ರೀತಿ ಮಳೆ ಸುರಿದರೆ ಮುಂದಿನ ದಿನಗಳಲ್ಲಿ ಬತ್ತಿ ಹೋಗಿದ್ದ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಬಂಡೀಪುರ ಅರಣ್ಯ ಹಸಿರಾಗುತ್ತಿದೆ
ಕೆಲವು ತಿಂಗಳ ಹಿಂದೆ ಹಸಿರೇ ಕಾಣದೆ ಒಣಗಿ ಹೋಗಿದ್ದ ಅರಣ್ಯದಲ್ಲಿ ಹಸಿರು ಮೇವಿಗಾಗಿ ಪರಿತಪಿಸುತ್ತಾ ಸೊರಗಿ ಹೋಗಿದ್ದ ಜಿಂಕೆಗಳು ಇದೀಗ ಹುಲ್ಲು ಚಿಗುರಿದ್ದರಿಂದ ಅದನ್ನು ಮೇಯುತ್ತಾ ಖುಷಿಯಾಗಿ ಕಾಲ ಕಳೆಯುತ್ತಿವೆ. ಅಷ್ಟೇ ಅಲ್ಲದೆ ಈ ಹಿಂದೆ ನೀರು ಮತ್ತು ಮೇವು ಅರಸಿ ದೂರ ಹೋಗಿದ್ದವುಗಳು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳಲು ಆರಂಭಿಸಿವೆ.

ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂಡೀಪುರಕ್ಕೆ ಬರುತ್ತಿದ್ದರೂ ವನ್ಯಪ್ರಾಣಿಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಾಣಿಗಳನ್ನು ನೋಡುವ ತವಕದಿಂದ ಬರುತ್ತಿದ್ದ ದೂರದ ಪ್ರವಾಸಿಗರು ಸಫಾರಿಯ ಸಂದರ್ಭ ಹೆಚ್ಚಿನ ಕಾಡು ಪ್ರಾಣಿಗಳು ಸಿಗದೆ ನಿರಾಸೆ ಪಡುತ್ತಿದ್ದರು. ಆದರೆ ಇದೇ ರೀತಿ ಮಳೆ ಬಂದರೆ ಮುಂದಿನ ದಿನಗಳಲ್ಲಿ ಹಿಂಡು ಹಿಂಡಾಗಿ ಕಾಡಲ್ಲಿ ಮೇಯುವ, ಒಂದನ್ನೊಂದು ಗುದ್ದಾಡುವ, ನೆಗೆದಾಡುವ ಜಿಂಕೆಗಳು ಎಲ್ಲೆಂದರಲ್ಲಿ ಅಲೆಯುವ ಕಾಡಾನೆ, ಕಾಡೆಮ್ಮೆ ಮತ್ತು ಹುಲಿಗಳ ದರ್ಶನ ಸುಲಭವಾಗಿ ಆಗಲಿದೆ.
ಇನ್ನಷ್ಟು ಮಳೆಯಾದರೆ ಅರಣ್ಯ ಸಮೃದ್ಧಿ
ಈಗ ಅರಣ್ಯ ಹಸಿರ ತೋರಣದೊಂದಿಗೆ ಕಂಗೊಳಿಸುವ ಕಾರಣ ಅರಣ್ಯದ ನಡುವೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಾಗುವುದು ಖುಷಿಕೊಡುತ್ತಿದೆ. ಇನ್ನು ತಮಿಳುನಾಡು ಮತ್ತು ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಜಿಂಕೆಗಳು ರಸ್ತೆ ಬದಿಯಲ್ಲಿ, ಅರಣ್ಯಗಳಲ್ಲಿ ಕಾಣಸಿಗುತ್ತವೆ. ಅರಣ್ಯದಲ್ಲಿ ವಾಹನವನ್ನು ನಿಲ್ಲಿಸುವಂತಿಲ್ಲವಾದರೂ ಕೆಲವರು ತಾವು ತೆರಳುತ್ತಿರುವ ವಾಹನವನ್ನು ನಿಲ್ಲಿಸಿ ಅವುಗಳ ಚಿತ್ರಗಳನ್ನು ಸೆರೆಹಿಡಿದು ಮುಂದೆ ಸಾಗುವುದು ಕಂಡು ಬರುತ್ತಿದೆ.

ಹೆದ್ದಾರಿ ಬದಿಯಲ್ಲಿ ವಿಹರಿಸುವ ಜಿಂಕೆಗಳು ನೆಗೆದು ಓಡಿದರೆ, ಮತ್ತೆ ಕೆಲವು ಮೇವು ತಿಂದು ಅದನ್ನು ಅರಗಿಸುವ ಸಲುವಾಗಿಯೋ ಎಂಬಂತೆ ಒಂದನ್ನೊಂದು ಗುದ್ದಾಡುತ್ತಾ ಬಲಪ್ರಯೋಗ ನಡೆಸುತ್ತವೆ. ಮತ್ತೆ ಕೆಲವು ಹಸಿರು ಸೊಪ್ಪು ತಿನ್ನಲು ಗಿಡದ ಕೆಳಗೆ ನಿಂತು ಮೇಲಕ್ಕೆ ಕತ್ತು ಚಾಚಿ ಸರ್ಕಸ್ ಮಾಡುತ್ತವೆ. ಭಯದ ಗಣ್ಣಿನಿಂದ ನೋಡುವ ಜಿಂಕೆಗಳು ನೋಡುಗರ ಮನವನ್ನು ತಮ್ಮತ್ತ ಸೆಳೆಯುತ್ತವೆ.
ಇನ್ನು ಅರಣ್ಯದೊಳಗೆ ಅಡ್ಡಾಡುವ ಕಾಡಾನೆಗಳು ಕಾಣಿಸಿಕೊಂಡು ಮೈನವಿರೇಳಿಸುತ್ತಿವೆ. ಸದ್ಯ ಮಳೆ ಸುರಿದಿದ್ದರಿಂದ ಬಂಡೀಪುರದಲ್ಲಿರುವ ವನ್ಯ ಪ್ರಾಣಿಗಳು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿವೆ. ಮುಂದೆ ಇನ್ನಷ್ಟು ಮಳೆಯಾಗಿ ಕೆರೆಕಟ್ಟೆಗಳು ತುಂಬಿ ಇಡೀ ಅರಣ್ಯ ಸಮೃದ್ಧಿಯಾದರೆ ಅದಕ್ಕಿಂತ ಸಂತಸ ಬೇರೊಂದಿಲ್ಲ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications