'ಒನ್ ಇಂಡಿಯಾ' ಜೊತೆ ಸಚಿವೆ ಗೀತಾ ಮಹದೇವ ಪ್ರಸಾದ್ ಮಾತು
ಮೈಸೂರು, ಸೆಪ್ಟೆಂಬರ್ 1 : ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಗೊಳ್ಳುತ್ತಿದೆ. ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕಿ ಗೀತಾ ಮಹದೇವಪ್ರಸಾದ್ ಮೊದಲ ಪ್ರಯತ್ನದಲ್ಲೇ ಸಚಿವರಾಗುವಲ್ಲಿ ಯಶ ಕಂಡಿದ್ದು ಜಿಲ್ಲೆಯ ಎರಡನೇ ಮಹಿಳಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ . ಇಂದು ಸಂಜೆ ಐದು ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ನಡೆಯಲಿದೆ.
ಮಹದೇವ ಪ್ರಸಾದ್ ಅವರ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ಕಳೆದ ಏಪ್ರಿಲ್ ನಲ್ಲಿ ನಡೆದಿತ್ತು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಪತ್ನಿ ಡಾ. ಗೀತಾ ಮಹದೇವಪ್ರಸಾದ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಇದೇ ವೇಳೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಗೀತಾ ಮಹದೇವಪ್ರಸಾದ್ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವುದು ಅವರಲ್ಲಿ ಹಾಗೂ ಕ್ಷೇತ್ರದ ಪಕ್ಷದ ಮುಖಂಡರಲ್ಲಿ ಖುಷಿ ತಂದಿದೆದೆ. ವೀರಶೈವ ಲಿಂಗಾಯಿತ ವರ್ಗದ ಕೋಟ ಹಾಗೂ ಮಹಿಳಾ ಕೋಟಾದಡಿಯಲ್ಲಿ ಗೀತಾ ಮಹದೇವಪ್ರಸಾದ್ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಉಪ ಚುನಾವಣೆ ಪ್ರಚಾರ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಈ ಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್ ಗೆಲುವು ಸಾಧಿಸಿದರೆ ಸಚಿವರಾದರೂ ಆಶ್ಚರ್ಯ ಇಲ್ಲ ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತ ಶಾಸಕರಾಗಿ ಆಯ್ಕೆಯಾಗಿದ್ದವರು ಎಚ್.ಎಸ್.ಮಹದೇವಪ್ರಸಾದ್ ಒಬ್ಬರೇ. ಈಗ ಅವರ ಪತ್ನಿ ಆಯ್ಕೆಯಾಗಿದ್ದು, ಅವರನ್ನು ಸಚಿವರಾಗಿ ಮಾಡಿದರೆ ಸಚಿವ ಸ್ಥಾನಕ್ಕೆ ಮತ್ತೆ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿದಂತೆಯೂ ಮತ್ತು ಮತ್ತೊಬ್ಬ ಮಹಿಳೆಗೆ ಸಂಪುಟದಲ್ಲಿ ಅವಕಾಶ ನೀಡಿದಂತೆಯೂ ಆಗುತ್ತದೆ. ಜತೆಗೆ ಚಾಮರಾಜನಗರ ಜಿಲ್ಲೆಗೆ ಪ್ರಾತ ನಿಧ್ಯ ನೀಡಿದಂತಾಗುತ್ತದೆ. ಇದರಿಂದ ಪಕ್ಷಕ್ಕೆ ಏಕಕಾಲದಲ್ಲಿ 3 ರೀತಿಯಲ್ಲಿ ಅನುಕೂಲವಾಗುತ್ತದೆ ಎಂಬುದು ಮುಖ್ಯ ಮಂತ್ರಿಗಳ ಲೆಕ್ಕಾಚಾರವಾಗಿದೆ.
2018ರ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವೀರಶೈವರ ಮತಗಳ ಮೇಲೆ ಕಣ್ಣಿಟ್ಟು, ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಚಾಮರಾಜನಗರ ಜಿಲ್ಲಾ ಪ್ರಾತಿನಿಧ್ಯ, ಜಾತಿ ಪ್ರಾತಿನಿಧ್ಯ ಹಾಗೂ ಮಹಿಳಾ ಪ್ರಾತಿನಿಧ್ಯ ಮೊದಲಾದ ಅಂಶಗಳು ಡಾ.ಗೀತಾ ಮಹದೇವ ಪ್ರಸಾದ್ ಅವರಿಗೆ ಸಚಿವ ಸ್ಥಾನಕ್ಕೆ ಮಾನದಂಡವಾಗಿದೆ.
ಡಾ.ಗೀತಾ ಮಹದೇವಪ್ರಸಾದ್ ಅವರು ಗುಂಡ್ಲುಪೇಟೆ ತಾಲ್ಲೂಕಿನ 4ನೇ ಶಾಸಕರು. ಶಾಸಕಿಯಾದ 2ನೇ ಮಹಿಳೆಯಾಗಿದ್ದಾರೆ. ಕುಟುಂಬದ 3ನೇ ವ್ಯಕ್ತಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಅವರು ಮೊದಲ ಯತ್ನದಲ್ಲೇ ಜಯಗಳಿಸಿದರು. ಮಾವ ಎಚ್.ಎನ್.ಶ್ರೀಕಂಠಶೆಟ್ಟಿ ಅವರು 2 ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕರ್ನಾಟಕದ ವಿಧಾನಸಭೆ ಇತಿಹಾಸದಲ್ಲಿ ಮಹಿಳೆಯೊಬ್ಬರು ವಿರೋಧ ಪಕ್ಷದ ನಾಯಕಿಯಾಗಿ ಹಾಗೂ ವಿಧಾನ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಕಬ್ಬಳ್ಳಿ ಕೆ.ಎಸ್.ನಾಗರತ್ನಮ್ಮ ಅವರದಾಗಿದೆ. ಅವರು ಈ ಕ್ಷೇತ್ರದಲ್ಲಿ 7 ಬಾರಿ ಆಯ್ಕೆಯಾಗಿ ಸಚಿವೆಯೂ ಆಗಿದ್ದರು. ಇನ್ನು ಸಂಪುಟಕ್ಕೆ ಆಯ್ಕೆಯಾಗಿರುವುದಕ್ಕಾಗಿ 'ಒನ್ ಇಂಡಿಯಾ' ಸಂಪರ್ಕಿಸಿದಾಗ ಗೀತಾ ಮಹದೇವ್ ಪ್ರಸಾದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ...

ಸಚಿವ ಸ್ಥಾನ ನಿಮಗೆ ದೊರಕಿದೆ. ಹೇಗೆನಿಸುತ್ತಿದೆ..?
ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತಿರುವ ಸುದ್ದಿ ಕೇಳಿ ಸಂತೋಷವಾಗಿದೆ. ತಾಲ್ಲೂಕಿಗೆ ಸೀಮಿತವಾಗಿದ್ದ ನನ್ನ ಕಾರ್ಯವ್ಯಾಪ್ತಿ ಜಿಲ್ಲೆ, ರಾಜ್ಯಕ್ಕೂ ವಿಸ್ತಾರವಾಗಿದ್ದು, ಜವಾಬ್ದಾರಿ ಹೆಚ್ಚಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ.

ಯಾವ ಖಾತೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೀರಾ?
ಯಾವುದೇ ಖಾತೆ ನೀಡಿದರೂ ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಆದರೆ ಮಹದೇವ್ ಪ್ರಸಾದ್ ಅವರ ಕಾರ್ಯವೈಖರಿ ಹಾಗೂ ಆಡಳಿತದ ವಿಧಾನವನ್ನು ಹತ್ತಿರದಿಂದ ನೋಡಿದ್ದೇನೆ. ನನಗೆ ಅವರೇ ಸ್ಫೂರ್ತಿ. ಅವರ ಸಹಕಾರ ಹಾಗೂ ಸಕ್ಕರೆ ಖಾತೆಯನ್ನೇ ನೀಡುತ್ತಾರೆಂಬ ಮಾತು ಕೇಳಿಬರುತ್ತಿದೆ. ಅದನ್ನು ಕೊಟ್ಟರು ಪರವಾಗಿಲ್ಲ.

ಸಚಿವರಾದ ಬಳಿಕ ನಿಮ್ಮ ಪ್ಲಾನ್ ಗಳೇನು?
ಶಾಸಕಿಯಾದ ಕೇವಲ 4 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು, ಸಚಿವರು ಹೆಚ್ಚು ಸಹಕಾರ ನೀಡಿದ್ದಾರೆ. ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ನಾನು ಸಚಿವೆಯಾಗುತ್ತೇನೆ ಎಂದು ಜನ ಹೇಳುತ್ತಾ ಇದ್ದರು. ಮುಖ್ಯಮಂತಿಗಳು ನನ್ನನ್ನು ಸಚಿವರನ್ನಾಗಿ ಮಾಡೇ ಮಾಡುತ್ತಾರೆ ಎಂಬ ವಿಶ್ವಾಸ ಜನರದ್ದಾಗಿತ್ತು. ಹಳೇ ಮೈಸೂರು ಭಾಗದ ಏಕೈಕ ವೀರಶೈವ ನಾಯಕರಾಗಿದ್ದ ಮಹದೇವ ಪ್ರಸಾದ್ ಅವರ ಸ್ಥಾನದಲ್ಲಿ ಪ್ರಾತಿನಿಧ್ಯ ಸಿಗಬಹುದು ಎಂದು ಹೇಳುತ್ತಿದ್ದರು. ಅದು ನಿಜವಾಗಿದೆ. ಆದರೆ ನಾನು ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡಿಲ್ಲ. ಇದು ಪಕ್ಷದ ನಿರ್ಧಾರ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪತಿಯವರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನನ್ನ ಹೆಚ್ಚಿನ ಪ್ರಾಶಸ್ತ್ಯ.

8 ತಿಂಗಳಿನಲ್ಲಿ ಯಾವ ತೆರನಾದ ಕೆಲಸವನ್ನು ಮಾಡಬಹುದು? ಅಷ್ಟೇ ಅವಧಿ ಸಾಕೇ?
ಉಳಿದಿರುವ 8 ತಿಂಗಳಲ್ಲಿ ಸಚಿವೆಯಾಗಿ ನನ್ನ ಸಾಮರ್ಥ್ಯವನ್ನು ತೋರಿಸಬೇಕಾದ ಸವಾಲಿದೆ. ಅದನ್ನು ಮುಖ್ಯಮಂತ್ರಿಗಳು, ಸಚಿವ ಸಂಪುಟದ ಹಿರಿಯ ಸಚಿವರು, ಶಾಸಕರ ಸಹಕಾರದಿಂದ ನಿರ್ವಹಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು












Click it and Unblock the Notifications