ಚಾಮರಾಜೇಶ್ವರ ದೇವಾಲಯಲ್ಲಿ ಹುಂಡಿ ಎಣಿಕೆ; ನನಗೆ ಹುಡುಗಿ ಕರುಣಿಸು ಎಂದು ಭಕ್ತನಿಂದ ಪತ್ರ
ಚಾಮರಾಜನಗರ, ಡಿಸೆಂಬರ್, 23: ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಗುರುವಾರ (ಡಿಸೆಂಬರ್ 23) ನಡೆದಿದ್ದು 7 ಲಕ್ಷ ರೂಪಾಯಿಗಳನ್ನು ಭಕ್ತರು ಶಿವನಿಗೆ ಅರ್ಪಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯದ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿದೆ. ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗ್ಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು, " ದೇವರ ರಾಜ್ಯ ಸಮೀಪಿಸಿದೆ" ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದುಕೊಂಡಿದ್ದಾನೆ. ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ.
7 ತಾಸುಗಳ ಕಾಲ ಹುಂಡಿ ಎಣಿಕೆ ಕಾರ್ಯ
ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ನೇತೃತ್ವದಲ್ಲಿ ಅರ್ಚಕ ರಾಮಕೃಷ್ಣ ಭಾರದ್ವಜ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಹಾಗೂ ಇನ್ನಿತರರು 7 ತಾಸು ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆ. ಹುಂಡಿಯಲ್ಲಿ ಒಟ್ಟು 7,61,641 ರೂಪಾಯಿ ಹಣ ಸಂಗ್ರಹವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದುವರೆಗೆ ಅತಿಹೆಚ್ಚು ಹಣ ಸಂಗ್ರಹ ಇದೇ ಮೊದಲ ಬಾರಿಯಾಗಿದೆ. ದೇವಾಲಯ ಜೀರ್ಣೋದ್ಧಾರ ಹಾಗೂ ರಥೋತ್ಸವ ನಡೆದಿದ್ದರಿಂದ ಇಷ್ಟು ಹಣ ಸಂಗ್ರಹವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಹನುಮನ ದರ್ಶನ ಪಡೆದ ಸುಪ್ರೀಂ ನ್ಯಾಯಮೂರ್ತಿ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಾಮರಾಜನಗರದ ಹರಳುಕೋಟೆ ಆಂಜನೇಯ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕೇಶ್ ಕುಮಾರ್ ಶಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು. ಚಾಮರಾಜನಗರದ ಜ್ಯೋತಿಷಿಯೊಂದಿಗೆ ಇಂದು ಹನುಮ ದೇಗುಲಕ್ಕೆ ಪತ್ನಿ ಡಿಂಪಿ ಶಾ ಅವರೊಟ್ಟಿಗೆ ಭೇಟಿಕೊಟ್ಟ ನ್ಯಾಯಮೂರ್ತಿಗೆ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದರು. ಬಳಿಕ, ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಹರಳುಕೋಟೆ ಆಂಜನೇಯ ದೇವರನ್ನು ಬಬ್ರುವಾಹನ ಸ್ಥಾಪಿಸಿದನೆಂಬ ಉಲ್ಲೇಖವಿದೆ. ಈ ದೇಗುಲಕ್ಕೆ ಸುಪ್ರೀಂ ನ್ಯಾಯಾಧೀಶರುಗಳಾಗಿದ್ದ ಎಸ್.ಎ.ಬೊಬ್ಡೆ, ಎನ್.ವಿ. ರಮಣ, ರಂಜನ್ ಗೊಗೋಯ್ ಭೇಟಿ ಕೊಟ್ಟು ಪೂಜೆ ಸಲ್ಲಿಸಿರುವುದು ಇನ್ನೂ ವಿಶೇಷವಾಗಿದೆ.

ಮೂಲ ಸೌಕರ್ಯ ಕಲ್ಪಿಸಲು ಸೂಚನೆ
ಇನ್ನು ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರದಲ್ಲಿ ಇತ್ತೀಚೆಗಷ್ಟೇ ತಿಳಿಸಿದ್ದರು.T












Click it and Unblock the Notifications