ಮಲೆ ಮಾದಪ್ಪನ ಹುಂಡಿ ಎಣಿಕೆ: ಕೇವಲ 39 ದಿನಗಳಲ್ಲಿ 2 ಕೋಟಿಗೂ ಅಧಿಕ ಹಣ ಸಂಗ್ರಹ
ಚಾಮರಾಜನಗರ, ಅಕ್ಟೋಬರ್, 11: ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 2.28 ಕೋಟಿ ರೂಪಾಯಿ ಸಂಗ್ರಹ ಆಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ 12 ತಾಸಿನಷ್ಟು ನಡೆದಿದ್ದು, 39 ದಿನಗಳಲ್ಲಿ ಬರೋಬ್ಬರಿ
2,28,63,914 ರೂಪಾಯಿ ಹಣ ಸಂಗ್ರಹ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ಹಾಗೂ ಸರ್ಕಾರಿ ರಜೆ ದಿನಗಳು, ಸಾಮೂಹಿಕ ವಿವಾಹ, ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.

ಈ ಮೂಲಕ 2.28 ಕೋಟಿ ರೂಪಾಯಿ ನಗದು, 92.5 ಗ್ರಾಂ ಚಿನ್ನ ಹಾಗೂ 2.7 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ.
ಹುಂಡಿಯಲ್ಲಿ ಪತ್ತೆಯಾದ್ವು ವಿಚಿತ್ರ ಪತ್ರಗಳು
ಐತಿಹಾಸಿಕ ದೇವಾಲಯ, ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಲ್ಲಿ 9 ತಿಂಗಳ ಬಳಿಕ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಭಕ್ತರು ದೇವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಗೆಬಗೆ ಪತ್ರಗಳನ್ನು ಬರೆದಿದ್ದರು.
ಓರ್ವರು ಓಂ ನಮಃ ಶಿವಾಯ ಎಂದು 108 ಬಾರಿ ಬರೆದ ಚೀಟಿಯನ್ನು ಹುಂಡಿಗೆ ಹಾಕಿ ಒಳಿತು ಮಾಡು ಭಗವಂತ ಎಂದು ಕೋರಿಕೊಂಡಿದ್ದಾರೆ. ಮತ್ತೋರ್ವರು "ದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದರೆ ತುಂಬಾ ತಪ್ಪು ಮಾಡುತ್ತಿದ್ದೇನೆ. ಇನ್ನು ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೋ, ನೀನೆ ಪರಿಹಾರ ಎಂದು ಮೊರೆ ಇಟ್ಟರೇ ಮತ್ತೋರ್ವ ತನ್ನ ಸ್ನೇಹಿತೆ ಪ್ರೀತಿಸಿದವನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನ್ನು ಕುರಿತು ಭಗವಂತನಿಗೆ ಬೇಡಿಕೆ ಸಲ್ಲಿಸಿದ್ದಾನೆ.
"ಹಾಯ್ ಪುಟ್ಟಾ, ಹೇಗಿದಿಯ.., ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ, ನೀನು ಹೀಗೆಲ್ಲ ಮಾಡಬಾರದಿತ್ತು, ನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು. ದೊಡ್ಡ ತಪ್ಪು ಮಾಡಿಬಿಟ್ಟೆ," ಎಂದು ಪತ್ರ ಬರೆದಿದ್ದಾನೆ.
ಇನ್ನೊಂದು ಪತ್ರ ವಿಶೇಷವಾಗಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿಸು ದೇವರೆ,, ಏಪ್ರಿಲ್ 9ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿಯನ್ನು ಭೇಟಿ ಮಾಡಿಸು ಎಂದು ಬರೆದಿದ್ದ ಪತ್ರ ಇಂದು ಪ್ರತ್ಯಕ್ಷವಾಗಿದೆ. ಹೀಗೆ ಆಸ್ಪತ್ರೆ ಚೀಟಿ, ಪಾನ್ ಕಾರ್ಡ್ ಜೆರಾಕ್ಸ್ ಸೇರಿದಂತೆ ಹಲವು ಬೇಡಿಕೆಗಳ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ.
ಇನ್ನು ಕಳೆದ 9 ತಿಂಗಳ ಅವಧಿಯಲ್ಲಿ ದೇವಾಲಯದ ಹುಂಡಿ ಎಣಿಕೆಯಲ್ಲಿ 4,30,680 ರೂಪಾಯಿ ಸಂಗ್ರಹವಾಗಿದೆ. ಎಣಿಕೆ ಕಾರ್ಯದಲ್ಲಿ ದೇವಾಲಯದ ಬಂಡಿಗಾರ್ ಮಹೇಶ್, ಉಪ್ಪಾರ ಮುಖಂಡ ಜಯಕುಮಾರ್, ಪೊಲೀಸರು ಹಾಜರಿದ್ದರು.












Click it and Unblock the Notifications