ಗಡಿಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆ, ಈ ಭಾಗಗಳಲ್ಲಿ ಕಾಡ್ಗಿಚ್ಚಿನ ಆತಂಕ ದೂರ
ಚಾಮರಾಜನಗರ, ಏಪ್ರಿಲ್, 20: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು (ಏಪ್ರಿಲ್ 20) ಗುಡುಗು ಸಹಿತ ಮಳೆಯಾಗಿದೆ. ಹಾಗೆಯೇ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಗಡಿಜಿಲ್ಲೆಯ ಚಾಮರಾಜನಗರದ ಹಲವೆಡೆ ವರುಣ ಆರ್ಭಟಿಸಿದ್ದು, ಇದು ಮೊದಲ ವರ್ಷಧಾರೆಯಾಗಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಬಂಡೀಪುರದ ವಿವಿಧ ವಲಯಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಭಾಗದಲ್ಲಿ ಜೋರು ಮಳೆಯಾಗಿದ್ದು, ಬಿಆರ್‌ಟಿಯ 5 ವಲಯಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಇನ್ನು ಗುಂಡ್ಲುಪೇಟೆ ತಾಲೂಕಿನ ಶಿವಪುರ, ಬೊಮ್ಮಲಾಪುರ, ಹಂಗಳ ಗ್ರಾಮಗಳ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದ್ದು, ಕಾಡಂಚಿನ ಗ್ರಾಮಗಳಲ್ಲೂ ಮೊದಲ ವರ್ಷಧಾರೆ ಸುರಿದಿದೆ.

ಇನ್ನು, ಕಾಡಿಗೆ ಬೆಂಕಿ ಬೀಳುವ ಆತಂಕದಲ್ಲಿದ್ದ ಅರಣ್ಯ ಪ್ರದೇಶಗಳಲ್ಲಿ ಆತಂಕ ಇದೀಗ ದೂರವಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿಯೂ ಈ ಭಾಗಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ ಮಳೆ ಪ್ರಮಾಣ ತೀವ್ರ ಕಡಿಮೆಯಾದ ಹಿನ್ನೆಲೆ ಜಿಲ್ಲೆಯ 5 ತಾಲೂಕುಗಳನ್ನು ಬರ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿತ್ತು. ಕಳೆದ 4-5 ತಿಂಗಳುಗಳಿಂದ ಒಂದು ಬಾರಿಯೂ ಮಳೆಯೂ ಬೀಳದೆ ಕೆರೆ-ಕಟ್ಟೆಗಳು ಬತ್ತಿ ಹೋಗಿ ಜನ-ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶನಿವಾರ ಮಧ್ಯಾಹ್ನ ಹಾಗೂ ಸಂಜೆ ಅರ್ಧ ಗಂಟೆಗೂ ಅಧಿಕ ಕಾಲ ಸುರಿದ ಮಳೆ ಸುರಿದಿರುವ ಹಿನ್ನೆಲೆ ರೈತರ ಮೊಗದಲ್ಲಿ ಅಲ್ಪ ಪ್ರಮಾಣದ ಮಂದಹಾಸ ಮೂಡಿದಂತಾಗಿದೆ.
ಜಿಲ್ಲೆಯ ವಿವಿಧೆಡೆ ಇದೀಗ ಕೃಷಿ ಚಟುವಟಿಕೆಗಳು ಗರಿಗೇದರಲಿದ್ದು, ಭೂಮಿ ಹದ ಮಾಡಿಕೊಳ್ಳಲು ರೈತರು ಆರಂಭಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಮಳೆ ನಿಗದಿಯಂತೆ ಬಿದ್ದರೆ ರೈತರು ನೆಮ್ಮದಿಯ ನಿಟ್ಟಿಸಿರು ಬಿಡಬಹುದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.












Click it and Unblock the Notifications