ಹನೂರು: ಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ
ಚಾಮರಾಜನಗರ, ಆಗಸ್ಟ್, 24: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ಪ್ರಕರಣಗಳಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ ಎನ್ನಬಹುದು. ಇದೀಗ ಪತ್ನಿ ನಿಧನದ ಸುದ್ದಿ ಕೇಳಿ ಪತಿಯೂ ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.
ಮಂಗಲ ಗ್ರಾಮದ ಶೇಖರ್ (70) ಹಾಗೂ ಸುಮಿತ್ರಮ್ಮ (65) ಎಂದು ಮೃತ ದಂಪತಿಗಳು. ಈ ದಂಪತಿಗಳು ಕೃಷಿಕರಾಗಿದ್ದು, ಮಂಗಲ ಸಮೀಪದ ರಾಮನಗುಡ್ಡ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶೇಖರ್ ರವರ ಪತ್ನಿ ಸುಮಿತ್ರಮ್ಮಗೆ ಶುಕ್ರವಾರ (ಆಗಸ್ಟ್ 23) ಮುಂಜಾನೆ ಎದೆ ನೋವು ಕಾಣಿಸಿಕೊಂಡಿದೆ. ಆಗ ಕೂಡಲೇ ಅವರನ್ನು ಕಾಮಗೆರೆ ಬಳಿ ಇರುವ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಮಿತ್ರಮ್ಮ ಚಿಕಿತ್ಸೆ ಫಲಿಸದೆ, ಶುಕ್ರವಾರ (ಆಗಸ್ಟ್ 23) ರಾತ್ರಿ ಮೃತಪಟ್ಟಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪತಿ ಶೇಖರ್ ಕೂಡ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಜೀವನ ಜಂಜಾಟದಲ್ಲಿ ಒಂದಾಗಿದ್ದ ದಂಪತಿಗಳು ಸಾವಿನಲ್ಲೂ ಒಂದಾಗಿರುವುದು ಇವರ ಆದರ್ಶ ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಹೃದಯಾಘಾತದಿಂದ ಯೋಧ ಸಾವು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಯೋಧರ ಗ್ರಾಮ ಎಂದೇ ಪ್ರಸಿದ್ಧ ಆಗಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಹೃದಯಘಾತದಿಂದ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವ ಘಟನೆ ಆಗಸ್ಟ್ 22ರಂದು ನಡೆದಿದೆ. ಹಾಗಾದರೆ ಇವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಯಾವಗ ತರಲಾಗುತ್ತದೆ ಎಂದು ಇಲ್ಲಿದೆ ಗಮನಿಸಿ.
ಸುಳ್ವಾಡಿ ಗ್ರಾಮದ ಅಂತೋನಿ ಸ್ವಾಮಿ ಮತ್ತು ಅಂತೋನಿ ಆಮ್ಮಾಳ ಅವರ ದ್ವಿತೀಯ ಪುತ್ರ ಜ್ಞಾನ ಪ್ರಕಾಶ್ (34) ಮೃತ ಯೋಧ. ಇವರು ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಪಂಜಾಬ್ ಗಡಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಗುರುವಾರ (ಆಗಸ್ಟ್ 22) ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪಾರ್ಥಿವ ಶರೀರವನ್ನು ಪಂಜಾಬ್ ರಾಜ್ಯದಿಂದ ಸ್ವಗ್ರಾಮಕ್ಕೆ ಶನಿವಾರ ತರಲಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯೋಧ ಜ್ಞಾನ ಪ್ರಕಾಶ್ ಅವರು ತಂದೆ, ತಾಯಿ, ಅಣ್ಣ, ತಂಗಿ ಹೆಂಡತಿ, 7 ವರ್ಷದ ಮಗನನ್ನು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.












Click it and Unblock the Notifications