ರಾಜ್ಯ ಸರ್ಕಾರದಿಂದ ಬೃಹತ್ ಆರೋಗ್ಯ ಮೇಳ, ಎಲ್ಲಿ?-ಮಾಹಿತಿ ತಿಳಿಯಿರಿ
ಚಾಮರಾಜನಗರ, ಜನವರಿ, 29: ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನು ಈಗಿನಿಂದಲೇ ಮಾಡುತ್ತಲೇ ಇವೆ. ಇನ್ನು ರಾಜ್ಯದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇನ್ನು ಇದೀಗ ರಾಜ್ಯ ಸರ್ಕಾರದಿಂದಲೇ ಇದೇ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರವನ್ನು ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ರೋಗಿಗಳು ವಿವಿಧ ಖಾಯಿಲೆಗಳ ತಪಾಸಣೆಗೆ ಒಳಪಟ್ಟರು.

ಈ ಬೃಹತ್ ಆರೋಗ್ಯ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರ ಚಿಕಿತ್ಸೆ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು, ಮಾನಸಿಕ ರೋಗ, ಮೂತ್ರಪಿಂಡ, ಕಿವಿ, ಮೂಗು, ಗಂಟಲು, ಕಣ್ಣಿನ ವಿಭಾಗ, ಚರ್ಮರೋಗ, ದಂತ ವಿಭಾಗ, ಶ್ವಾಸಕೋಶ ವಿಭಾಗ, ಕ್ಯಾನ್ಸರ್, ಹೃದಯ, ಸ್ಕ್ಯಾನಿಂಗ್, ಸ್ತ್ರೀ ರೋಗ, ಎಂಡೋಕ್ರೀನೊಲಜಿ ಮತ್ತು ಆಯುರ್ವೇದ ವಿಭಾಗಗಳಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಜನರು ತಪಾಸಣೆಗೆ ಒಳಪಟ್ಟರು.
ಮೇಳದಲ್ಲಿ ರಕ್ತದಾನ ಶಿಬಿರ, ಉಚಿತ ಪ್ರಯೋಗಾಲಯ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಪರೀಕ್ಷೆ, ಆಯುಷ್ಮಾನ್ ಭಾರತ್ ಪಿಎಂಜೆಎವೈ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಕಾರ್ಡ್ ನೊಂದಣಿ, ನೇತ್ರದಾನ ನೊಂದಣಿ, ಅಂಗಾಂಗ ದಾನ ನೊಂದಣಿ, ಕ್ಷಯ ರೋಗ ಪರೀಕ್ಷೆ, ಕೋವಿಡ್ ಪರೀಕ್ಷೆ, ಯೋಗ ಮತ್ತು ಧ್ಯಾನವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ನೋಂದಾಯಿಸಿದ್ದ 6,500 ರೋಗಿಗಳನ್ನು ವಾಹನ ವ್ಯವಸ್ಥೆ ಮಾಡಿ ಕರೆತರಲಾಗಿತ್ತು. ಅಲ್ಲದೇ 2 ಸಾವಿರಕ್ಕೂ ಅಧಿಕ ರೋಗಿಗಳು ನೇರವಾಗಿ ಆರೋಗ್ಯ ಮೇಳಕ್ಕೆ ಆಗಮಿಸಿ ಪರೀಕ್ಷೆಗೆ ಒಳಪಟ್ಟರು. ಇನ್ನು ಆರೋಗ್ಯ ಮೇಳದಲ್ಲಿ 100ಕ್ಕೂ ಹೆಚ್ಚು ತಜ್ಞ ವೈದ್ಯರು, ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಬಂದವರಿಗೆ ಕುಡಿಯುವ ನೀರು, ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಚಾಲನೆ: ಬೃಹತ್ ಆರೋಗ್ಯ ಶಿಬಿರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ, ಅವರು ಮಾತನಾಡಿ ಹನೂರು, ರಾಮಾಪುರದಲ್ಲಿ ಏಕಬಳಕೆ ಡಯಾಲಿಸಿಸ್ ಕೇಂದ್ರ ತೆರಯಲಾಗುತ್ತದೆ. ಆರೋಗ್ಯ ಸೇವೆ ಜನರ ಬಳಿಗೇ ತೆಗೆದುಕೊಂಡು ಹೋಗಲು ಈ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಿದೆ. ಸಮಗ್ರ ರೋಗ ತಪಾಸಣೆ , ಔಷಧಿ ವಿತರಣೆ ಮಾಡಲಾಗುತ್ತದೆ. ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಕ್ರಮ ವಹಿಸುತ್ತೇನೆ ಎಂದು ಭರವಸೆ ಕೊಟ್ಟರು.
ಪ್ರತಿ ಕೌಂಟರ್‌ಗೆ ಸಚಿವರು ಭೇಟಿ: ಆರೋಗ್ಯ ಶಿಬಿರದಲ್ಲಿ ತೆರೆಯಲಾಗಿದ್ದ ಪ್ರತಿ ಕೌಂಟರ್‌ಗೆ ಸಚಿವ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಾಸಣೆಗೆ ಬಂದಿದ್ದ ಜನರನ್ನು ಮಾತನಾಡಿಸಿ ಆರೋಗ್ಯ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಇನ್ನು ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.












Click it and Unblock the Notifications