ಗುಂಡ್ಲುಪೇಟೆ: ಜಾಂಬವಂತನನ್ನು ಬೇಟೆಯಡಾಡಿದ ವ್ಯಾಘ್ರ, ವಿಡಿಯೋ ವೈರಲ್
ಚಾಮರಾಜನಗರ, ಜನವರಿ, 25: ಮನುಷ್ಯರ ನಡುವೆ ಹೇಗೆ ಕಾಳಗಗಳು ನಡೆಯುತ್ತವೆಯೋ ಅದೇ ರೀತಿ ಪ್ರಾಣಿಗಳ ನಡುವೆಯೂ ಕಾಳಗಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ನಡೆದಿರುವ ಜಾಂಬವಂತನನ್ನು ವ್ಯಾಘ್ರ ಬೇಟೆಯಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ
ಜಾಂಬುವಂತನನ್ನು ವ್ಯಾಘ್ರ ಬೇಟೆಯಾಡಿದ ರೋಚಕ ದೃಶ್ಯವನ್ನು ಬಂಡೀಪುರ ಸಫಾರಿಗೆ ತೆರಳಿದ ಪ್ರವಾಸಿಗರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಿಡಿದಿದ್ದಾರೆ.

ನೀರು ಕುಡಿಯಲು ಬಂದ ವೇಳೆ ಕರಡಿಯ ಮೇಲೆ ಹುಲಿ ದಾಳಿ ಮಾಡಿ ಕೊಂದು ತಿಂದಿದೆ. ಹುಲಿ ಬಾಯಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಾದ್ಯವಾಗದೆ ಕರಡಿ ಒದ್ದಾಡಿ ಪ್ರಾಣ ಬಿಟ್ಟಿದೆ.
ಕಾಡೆಮ್ಮೆ ಹಾಗೂ ಕಾಡಾನೆಗಳು ಮುಖಾಮುಖಿ
ವನ್ಯಜೀವಿಗಳು ಅಗಾಗ್ಗೆ ಮುಖಾಮುಖಿ ಆಗುತ್ತಿರುತ್ತವೆ. ಕೆಲವೊಮ್ಮೆ ಕಾಳಗಕ್ಕೆ ಇಳಿದರೇ, ಮತ್ತೊಮ್ಮೆ ಕಾಲ್ಕೀಳುತ್ತವೆ. ಇನ್ನೂ ಕೆಲವು ತಮ್ಮ ಪಾಡಿಗೆ ತಾವು ಹೋಗುತ್ತವೆ. ಅಂಥದ್ದೇ ಒಂದು ಘಟನೆ ಚಾಮರಾಜನಗರದ ಬಿಳಿಗಿರಿರಂಗನಾಥ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕಾಡೆಮ್ಮೆ ಹಾಗೂ ಕಾಡಾನೆಗಳ ಹಿಂಡು ಮುಖಾಮುಖಿ ಆಗಿದ್ದವು. ಕಾಡೆಮ್ಮೆ ಹಾಗೂ ಆನೆಗಳು ಕೆಲ ಕ್ಷಣ ದೃಷ್ಟಿ ಯುದ್ಧ ನಡೆಸಿದ ಬಳಿಕ, ಎಮ್ಮೆಗಳ ಸಹವಾಸ ಬೇಡ ಎನ್ನುವ ರೀತಿ ಕಾಡಾನೆಗಳ ಹಿಂಡು ಬೇರೆ ದಾರಿಯತ್ತ ತೆರಳಿರುವ ದೃಶ್ಯ ಇದೀಗ ಎಲ್ಲೆಡೆ ಭಾರೀ ವೈರಲ್ ಆಗಿತ್ತು.
ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯರು ಕಾದಾಡುವಾಗಲೂ, ಕ್ಲೈಮ್ಯಾಕ್ಸ್ ಎನ್ನುವ ರೀತಿಯಲ್ಲಿ ಕೊನೆಯಲ್ಲಿ ಜಗಳ ಬಿಡಿಸಿ ಇದಕ್ಕೆಲ್ಲ ನಾಂದಿಯಾಡುವವರು ಇದ್ದೇ ಇರುತ್ತಾರೆ. ಅದೇ ರೀತಿ ಇಲ್ಲಿ ಕಾಡೆಮ್ಮೆ ಹಾಗೂ ಕಾಡಾನೆಗಳು ಮುಖಾಮುಖಿಯಾಗಿದ್ದು, ಕೊನೆಗೆ ತಾವೇ ಸೋಲೊಪ್ಪಿಕೊಳ್ಳುವ ರೀತಿಯಲ್ಲಿ ಕಾಡಾನೆಗಳು ಹಿಂದೆ ಸರಿದ ಘಟನೆ ನಡೆದಿತ್ತು.
ಆನೆಯೊಂದಿಗೆ ಸೆಲ್ಫಿಗಾಗಿ ಪ್ರವಾಸಿಗರ ಕ್ಯೂ
ಹಾಗೆಯೇ ಕರ್ನಾಟಕದ ಕಾಶ್ಮೀರ ಅಂತಲೇ ಕರೆಯುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಇಂದು (ಜನವರಿ 04) ಕಾಡಾನೆ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಘಟನೆ ನಡೆದಿತ್ತು.
ಗೋಪಾಲಸ್ವಾಮಿ ಬೆಟ್ಟದ ದೇಗುಲ ಸಮೀಪ ಆಗಾಗ್ಗೆ ಕಾಡಾನೆಯೊಂದು ಎಂಟ್ರಿ ಕೊಡಲಿದ್ದು, ಇಂದು (ಜನವರಿ 04) ಅದೇ ರೀತಿ ಕಾಡಾನೆ ಎಂಟ್ರಿ ಕೊಟ್ಟಿದೆ. ಕಾಡಾನೆ ಕಂಡೊಡನೆ ರೋಮಾಂಚಿತರಾದ ಪ್ರವಾಸಿಗರು ಹುಚ್ಚಾಟ ಮೆರೆದಿದ್ದು, ಆನೆ ಸಮೀಪಕ್ಕೆ ತೆರಳಿ ಫೋಟೋ, ವೀಡಿಯೋ ಮಾಡಿದ್ದರು.
ಕೆಲವು ವರ್ಷಗಳಿಂದ ಕಾಡಾನೆಯೊಂದು ದೇವಾಲಯದ ಸಮೀಪ ಆಗಾಗ್ಗೆ ಕಾಣಿಸಿಕೊಳ್ಳಲಿದ್ದು, ಅದೃಷ್ಟವಶಾತ್ ಇಲ್ಲಿಯ ತನಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇನ್ನು ಬೆಂಗಳೂರಿನಿಂದ ಆಗಮಿಸಿದ್ದ ಮಹಾದೇವಸ್ವಾಮಿ ಎಂಬವರು ಈ ಬಗ್ಗೆ ಮಾತನಾಡಿ, ಎಷ್ಟೇ ಆದರೂ ಅದು ಕಾಡುಪ್ರಾಣಿ. ಕೆಲವರು ತೀರ ಸಮೀಪವೇ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡರು. ಏನೇ ಆದರೂ ಸುರಕ್ಷತೆ ಮುಖ್ಯ, ಅವು ಸುರಕ್ಷಿತವಾಗಿರಬೇಕು, ನಾವು ಸುರಕ್ಷಿತವಾಗಿರಬೇಕು ಎಂದು ಹೇಳಿದ್ದರು.












Click it and Unblock the Notifications