ವಕೀಲನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಕಲಾಪ ಬಹಿಷ್ಕರಿಸಿದ ವಕೀಲರು
ಚಾಮರಾಜನಗರ, ಜೂನ್ 03: ಗುಂಡ್ಲುಪೇಟೆ ಪಟ್ಟಣದ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಕಲಾಪಗಳನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.
ಪಟ್ಟಣದ ನ್ಯಾಯಾಲಯಗಳ ಆವರಣದಲ್ಲಿ ಶನಿವಾರ ಸಮಾವೇಶಗೊಂಡ ವಕೀಲ ಸಂಘದ ಪದಾಧಿಕಾರಿಗಳು ತಮ್ಮ ಸಹೋದ್ಯೋಗಿ ವಕೀಲರಾದ ರಂಜಿತ್ ಅವರ ಮೇಲೆ ಪೋಲೀಸರು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಗುಂಡ್ಲುಪೇಟೆ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್ ಮಾತನಾಡಿ 'ವಕೀಲ ರಂಜಿತ್ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಅಮಾನತು ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ವಕೀಲರ ಸಂಘದ ಪದಾಧಿಕಾರಿಗಳಾದ ಹೆಚ್.ವಿ. ರವಿಕಾಂತ್ , ಬಿ. ಶಿವಣ್ಣ, ಎಸ್.ಎನ್. ನಂದೀಶ್ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಅನಿಲ್ ಕುಮಾರ್, ಕಿರಣ್, ಪುಟ್ಟಸ್ವಾಮಿ, ಜವರಾಜು, ಟಿಪ್ಪು ಸುಲ್ತಾನ್ , ರಾಜೇಶ್, ಶಾಂತಮಲ್ಲಪ್ಪ , ಮನು ಶ್ಯಾನುಭೋಗ್ ಸೇರಿದಂತೆ ವಕೀಲರ ಸಂಘದ ಸದಸ್ಯರು ಹಾಜರಿದ್ದರು.
ಘಟನೆಯ ಹಿನ್ನೆಲೆ ಏನು?
ಕೌಟುಂಬಿಕ ಸಮಸ್ಯೆ ಸಂಬಂಧ ವಕೀಲ ರಂಜಿತ್ ಅವರ ಮಾವ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಠಾಣೆಗೆ ಕರೆದೊಯ್ದ ಪೊಲೀಸರು ವಕೀಲ ರಂಜಿತ್ ಅವರ ಮೇಲೆ ಕಳೆದ ಬುಧವಾರ ರಾತ್ರಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ರಂಜಿತ್ ಅವರು ವಕೀಲರ ಸಂಘಕ್ಕೆ ದೂರು ನೀಡಿದ್ದರು. ಇಂದು ನ್ಯಾಯಲಯದ ವಕೀಲರ ಸಂಘದ ಆವರಣದಲ್ಲಿ ವಕೀಲರು ಸಭೆ ನಡೆಸಿ ನಡಾವಳಿ ಅಂಗೀಕರಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಕಲಾಪದಿಂದ ಹೊರಗುಳಿದಿದ್ದಾರೆ.
ಆನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ವಿತರಣೆ
ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಸರಗೂರು ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರದ ಚೆಕ್ ವಿತರಿಸಿದೆ. ಹೆಡಿಯಾಲ ಉಪವಿಭಾಗದ ಮೊಳೆಯೂರು ವಲಯದ ಕಾಡಂಚಿನ ಗ್ರಾಮದಲ್ಲಿ ಜೂ.1ರಂದು ರಾತ್ರಿ ಜಮೀನಿನ ಕಾವಲು ಕಾಯಲು ತೆರಳಿದ್ದ ರವಿಕುಮಾರ್ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಮೃತ ರೈತನ ನಿವಾಸಕ್ಕೆ ತೆರಳಿದ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಡಾ.ರಮೇಶ್‌ಕುಮಾರ್ ಮೃತರ ಕುಟುಂಬದ ಸದಸ್ಯರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ಈ ವೇಳೆ ಎಸಿಎಫ್ ಕೆ.ಪರಮೇಶ್, ಹೆಡಿಯಾಲ, ಎನ್.ಬೇಗೂರು, ಗುಂಡ್ರೆ, ಮೊಳೆಯೂರು ವಲಯಗಳ ಆರ್‌ಎಫ್‌ಒಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications