ಮುಂಗಾರು ಮಳೆ ಅಬ್ಬರಕ್ಕೆ ಮುಳುಗಿದ ಗುಂಡ್ಲುಪೇಟೆ ಬಸ್ ನಿಲ್ದಾಣ: ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳ ಪರದಾಟ
ಚಾಮರಾಜನಗರ, ಜೂನ್, 03: ಕಳೆದ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆ ರೈತರ ಪಾಡು ಹೇಳತೀರಾದಾಗಿತ್ತು. ಇದೀಗ 2024ರ ಜೂನ್ 1ರಿಂದಲೇ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಈಗಾಗಲೇ ನಿನ್ನೆ (ಜೂನ್ 2) ಸುರಿದ ಅಬ್ಬರದ ಮಳೆಯಿಂದ ಹಲವೆಡೆ ದೊಡ್ಡ ಡೊಡ್ಡ ಅನಾಹುತಗಳೇ ಸೃಷ್ಟಿಯಾಗಿವೆ. ಹಾಗೆಯೇ ಶನಿವಾರದಿಂದಲೂ ಇಂದಿನವರೆಗೂ ಗಡಿಜಿಲ್ಲೆಯಲ್ಲಿ ಮುಂಗಾರು ಆರ್ಭಟದಿಂದ ಅನಾಹುತಗಳೇ ಸಂಭಸಿವೆ.

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದಲ್ಲಿ ಇಂದು (ಜೂನ್ 03) ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ರಸ್ತೆಗಳೆಲ್ಲೆ ಹೊಳೆಯಂತೆ ಮಾರ್ಪಟ್ಟಿವೆ. ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಇನ್ನು ಮುಂಗಾರು ಆರ್ಭಟಕ್ಕೆ ಗುಂಡ್ಲುಪೇಟೆ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತವಾಗಿ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಪರದಾಡಿದ್ದಾರೆ. ಬಸ್ ನಿಲ್ದಾಣದ ಸುತ್ತ ಎರಡು ಅಡಿ ನೀರು ನಿಂತಿದೆ ಎಂದು ತಿಳಿದುಬಂದಿದೆ.
ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ರಸ್ತೆಗಳು: ಈಗಾಗಲೇ ರಾಜ್ಯಾದ್ಯಂತ ಮುಂಗಾರು ಮಳೆ ಚುರುಕು ಪಡೆದಿದ್ದು, ಹಲವೆಡೆ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲೂ ಕೂಡ ಮಳೆರಾಯ ಅವಾಂತಗಳನ್ನು ಸೃಷ್ಟಿ ಮಾಡಿದ್ದಾನೆ. ಹಾಗಾದರೆ ಏನೆಲ್ಲ ಅನಾಹುತಗಳಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿವೆ. ತರಕಾರಿ ಬೆಳೆ ಹಾನಿಯಾಗಿವೆ. ಇಷ್ಟೆಲ್ಲ ತೊಂದರೆ ಆಗಿದ್ದರೂ,
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಮಂಡಲೂರು, ಹುಣಸೆಕಟ್ಟೆ, ಕಾಟೇಹಳ್ಳಿ, ಚಿನ್ನಸಮುದ್ರ, ಲಕ್ಕಮುತ್ತೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಡೆರಾತ್ರಿ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಅಣಜಿ ಹಳ್ಳ ರಭಸವಾಗಿ ಹರಿದು ಮಂಡಲೂರು-ಗೊಲ್ಲರಹಟ್ಟಿ ಸಂಪರ್ಕ ರಸ್ತೆ, ಮಂಡಲೂರು-ಲಕ್ಕೆಮುತ್ತೇನಹಳ್ಳಿ ರಸ್ತೆ ಹಾಗೂ ಮಂಡಲೂರು-ಕಾಟೇಹಳ್ಳಿ ತಾಂಡಾ, ಕದರಪ್ಪನಹಟ್ಟಿ ರಸ್ತೆಗಳ ಸಂಪರ್ಕ ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಅಲ್ಲದೇ ಹುಣಸೆಕಟ್ಟೆ ಗ್ರಾಮದ ಶೇಖರಪ್ಪ ತನ್ನ ನಾಲ್ಕು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮೆಟೊ, ಮೆಣಸಿನಕಾಯಿ ನೀರಿನಲ್ಲಿ ಕೋಚಿ ಹೋಗಿವೆ. ಅಡಿಕೆ ತೋಟಗಳಿಗೂ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಮಳೆಯಿಂದ ಇಷ್ಟೆಲ್ಲ
ರಸ್ತೆಗಳು ಮತ್ತು ಬೆಳೆ ಹಾನಿಯಾಗಿದ್ದರೂ ಒಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಶಾಸಕರು ಬಂದು ಪರಿಶೀಲನೆ ನಡೆಸಿದ್ದರೂ ಕೂಡ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ
ಭೇಟಿ ನೀಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಗ್ರಾಮಸ್ಥರಿಗೆ, ರೈತರಿಗೆ ಇಷ್ಟು ತೊಂದರೆ ಆಗಿದ್ದರೂ ಅವರ ಸಮಸ್ಯೆಗಳನ್ನು ಆಲಿಸುವ ಸೌಜನ್ಯವಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಇಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ-48ರ ಹುಣಸೆಕಟ್ಟೆ ಗ್ರಾಮದ ಬಳಿ ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದ ಮಳೆ ಬಂದಾಗ ಗುಡ್ಡದಿಂದ ಹರಿದು ಬರುವ ನೀರು ಹುಣಸೆಕಟ್ಟೆ ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಹೆದ್ದಾರಿ
ಸೇತುವೆ ಬಳಿ ಮಳೆ ನೀರು ಹರಿದು ಹೋಗಲು ಸಣ್ಣ-ಸಣ್ಣ ಸಿಮೇಂಟ್ ಪೈಪ್ ಅಳವಡಿಸಿದ್ದರಿಂದ ಹೂಳು ತುಂಬಿ ನೀರು ಸರಾಗವಾಗಿ ಹರಿಯದೆ, ಗುಡ್ಡದಿಂದ ಬರುವ ನೀರು ಗ್ರಾಮಕ್ಕೆ ನುಗ್ಗುತ್ತಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿ ಸರಿಪಡಿಸಬೇಕೆಂದು ಆಗ್ರಹಿಸಿದರು.












Click it and Unblock the Notifications