ಚಾಮರಾಜನಗರ: ಹೆಣ್ಮಕ್ಕಳಿಗೆ ಕಂಕಣ, ಸಂತಾನ ಕರುಣಿಸುತ್ತಾಳೆ ಈ ಸ್ವರ್ಣಗೌರಿ!

ಚಾಮರಾಜನಗರ, ಸೆಪ್ಟೆಂಬರ್ 18: ಎಲ್ಲೆಡೆ ಹೆಣ್ಮಕ್ಕಳು ಸಂಪ್ರದಾಯಬದ್ಧವಾಗಿ ತಮ್ಮ ಮನೆಗಳಲ್ಲಿ ಗೌರಿ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಕುದೇರಿನಲ್ಲಿ ಮಾತ್ರ ಹಬ್ಬ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿ ಮನೆಮನೆಗಳಲ್ಲಿ ಹಬ್ಬ ನಡೆಯದೆ ಹೆಣ್ಮಕ್ಕಳು ಒಟ್ಟಾಗಿ ಗೌರಿಯನ್ನು ಪ್ರತಿಷ್ಠಾಪಿಸಿ ಕಂಕಣ ಮತ್ತು ಸಂತಾನ ಭಾಗ್ಯ ಕರುಣಿಸುವಂತೆ ಬೇಡಿಕೊಳ್ಳುವುದು ಕಂಡು ಬರುತ್ತದೆ.

ಗೌರಿಹಬ್ಬದ ಆಚರಣೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಭಿನ್ನತೆ ಇರುವುದು ಸರ್ವೇ ಸಾಮಾನ್ಯ. ಆದರೂ ಹೆಣ್ಮಕ್ಕಳು ಬಾಗಿನ ನೀಡಿ ತನಗೂ ತನ್ನ ಸಂಸಾರಕ್ಕೂ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸುವುದು ಎಲ್ಲ ಕಡೆಯೂ ನಡೆಯುತ್ತದೆ. ಅದರಲ್ಲೂ ಗೌರಿ ಹಬ್ಬದಲ್ಲಿ ವಿವಾಹವಾಗದ ಯುವತಿಯರು ಕಂಕಣ ಕೂಡಿ ಬರಲೆಂದು, ಮದುವೆಯಾದವರು ಸಂತಾನ ಭಾಗ್ಯ ಕರುಣಿಸು ಎಂದು ಗೌರಿಯನ್ನು ಬೇಡಿಕೊಳ್ಳುವುದು ಇದ್ದೇ ಇರುತ್ತದೆ.

gowri-ganesha-festival-celebration-in-chamarajanagar

ಇದೆಲ್ಲದರ ನಡುವೆ ಕುದೇರು ಸ್ವರ್ಣಗೌರಿ ಮಾತ್ರ ತನ್ನದೇ ಆದ ವಿಶೇಷತೆ ಹೊಂದಿ, ಹೆಣ್ಮಕ್ಕಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿದ್ದಾಳೆ. ಹೀಗಾಗಿಯೇ ಗೌರಿ ಹಬ್ಬದಂದು ಇಲ್ಲಿ ಹೆಣ್ಮಕ್ಕಳ ಜಾತ್ರೆಯೇ ನೆರೆದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಗೌರಿಗೆ ನಮಿಸುತ್ತಾರೆ. ಇನ್ನು ಕುದೇರು ಸ್ವರ್ಣಗೌರಿಯ ಬಗ್ಗೆ ಹೇಳಲೇ ಬೇಕಾಗುತ್ತದೆ.

ಎಲ್ಲರೂ ಒಂದೆಡೆ ಸೇರಿ ಹಬ್ಬಾಚರಣೆ

ಕುದೇರಿನ ಸ್ವರ್ಣ ಗೌರಮ್ಮಳನ್ನು ಹೆಣ್ಮಕ್ಕಳ ಇಷ್ಟಾರ್ಥವನ್ನು ನೆರವೇರಿಸುವ ತಾಯಿ ಎಂದೇ ಕರೆಯಲಾಗುತ್ತದೆ. ಆಕೆಯಲ್ಲಿ ಭಕ್ತಿಯಿಂದ ಬೇಡಿಕೊಂಡವರ ಇಷ್ಟಾರ್ಥಗಳಾದ ಕಂಕಣ ಬಲ ಮತ್ತು ಸಂತಾನ ಭಾಗ್ಯವನ್ನು ನೆರವೇರಿಸಿ ಜನ್ಮಪಾವನ ಮಾಡಿರುವುದು ಇವತ್ತು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಹೆಣ್ಮಕ್ಕಳು ಪೂಜೆ ಸಲ್ಲಿಸುತ್ತಿರುವುದೇ ಸಾಕ್ಷಿಯಾಗಿದೆ.

ಗಣಪತಿಯನ್ನು ಸಾಮೂಹಿಕವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಇದ್ದೇ ಇದೆ. ಆದರೆ ಕುದೇರುನಲ್ಲಿ ಮಾತ್ರ ಭಿನ್ನ. ಏಕೆಂದರೆ ಇಲ್ಲಿ ಕಡಲೆಹಿಟ್ಟಿನಿಂದ ಗೌರಿಯನ್ನು ತಯಾರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪಿಸಿ ಗ್ರಾಮಸ್ಥರೆಲ್ಲರೂ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ಊರಿನ ಹೆಣ್ಮಕ್ಕಳು ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಗ್ರಾಮದಲ್ಲಿ ಗೌರಿ ದೇಗುಲವಿರುವುದರಿಂದ ಗ್ರಾಮದಲ್ಲಿ ಗೌರಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸದೆ, ಎಲ್ಲರೂ ಒಂದೆಡೆ ಸೇರಿ ಹಬ್ಬವನ್ನು ಆಚರಿಸುತ್ತಾರೆ.

ಗೌರಿಗೆ ಚಿನ್ನದ ಕವಚಧಾರಣೆ

ಕುದೇರು ಗ್ರಾಮದಲ್ಲಿ ಹಬ್ಬದ ಆಚರಣೆ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಾ ಹೋದರೆ, ಗ್ರಾಮದ ದೊಡ್ಡಕೆರೆ ಯಮುನಾ ತಡಿಯಲ್ಲಿ ಹಬ್ಬಕ್ಕೂ ಮೊದಲು ಮರಳಿನ ಗೌರಿಯನ್ನು ಸಿದ್ಧಗೊಳಿಸಿ ನಂತರ ಹಬ್ಬದ ದಿನ ವಿಶೇಷ ಪೂಜೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

gowri-ganesha-festival-celebration-in-chamarajanagar

ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನ ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ ಆಭರಣ ಹಾಕಲಾಗುತ್ತದೆ. ದೇವಾಲಯದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಬಳಿಕ ಸುಮಾರು ಹನ್ನೆರಡು ದಿನಗಳ ಕಾಲ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಪೂಜಾ ಕೈಂಕರ್ಯಗಳು ಹೇಗಿರುತ್ತವೆ ಎನ್ನುವುದನ್ನು ನೋಡಿದ್ದೇ ಆದರೆ, ಗೌರಿಯನ್ನು ಪ್ರತಿಷ್ಠಾಪಿಸಿದ ಆರಂಭ ದಿನದಲ್ಲಿ ನವದಂಪತಿಗಳು ಬಾಗಿನ ಅರ್ಪಿಸುತ್ತಾರೆ.

ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆ

ಆ ನಂತರ ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲು ಸಮರ್ಪಣೆ ಮಡುತ್ತಾರೆ. ಯುವತಿಯರು ಕಂಕಣ ಭಾಗ್ಯಕ್ಕಾಗಿ ಮಾಂಗಲ್ಯವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅಷ್ಟೇ ಅಲ್ಲದೆ ದೀಪೋತ್ಸವ, ದೀಪಾರಾಧನೆ ಸೇರಿದಂತೆ ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆಗಳನ್ನು ಹರಿಸಿಕೊಂಡ ಭಕ್ತರು ಸಲ್ಲಿಸಿ ಗೌರಿಯನ್ನು ಒಳಿತು ಮಾಡಲೆಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಕುದೇರು ಗ್ರಾಮದಲ್ಲಿರುವ ಗೌರಿ ದೇವಾಲಯವನ್ನು 1912 ರಲ್ಲಿ ನಿರ್ಮಿಸಲಾಗಿದೆ. ಮೊದಲಿಗೆ ಗೌರಿಗೆ ಕಡಲೆ ಹಿಟ್ಟಿನ ಗೌರಮ್ಮ ಎನ್ನುತ್ತಿದ್ದ ಜನತೆ ತದ ನಂತರ ಊರ ಹಬ್ಬವಾಗಿ ಆಚರಿಸಲು ವಿಗ್ರಹಕ್ಕೆ ಚಿನ್ನದ ಕವಚ, ಆಭರಣ ತೊಡಿಸಿದರು. ಅಂದಿನಿಂದ ಇದು ಸ್ವರ್ಣ ಗೌರಿ ಎಂದೇ ಹೆಸರುವಾಸಿಯಾಗಿದೆ. ಇತರೆ ದಿನಗಳಲ್ಲಿ ಇಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತವೆಯಾದರೂ, ಗೌರಿ ಹಬ್ಬದಂದು ವಿಶೇಷ ಪೂಜೆಗಳು ನಡೆಯುತ್ತವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಕುದೇರು ಸ್ವರ್ಣ ಗೌರಿಯ ಬಗ್ಗೆ ಅರಿತವರು ಗೌರಿ ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡು ಹೋದರೆ ಇನ್ನು ಕೆಲವರು ಹರಕೆ ತೀರಿಸಲೆಂದು ಬರುವುದರಿಂದ ಹಬ್ಬದಂದು ಹೆಣ್ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+