ಚಾಮರಾಜನಗರ ಜಿಲ್ಲಾಧಿಕಾರಿಗೆ ಮತ್ತೊಂದು ಜವಾಬ್ದಾರಿ ಕೊಟ್ಟ ಸರ್ಕಾರ
ಚಾಮರಾಜನಗರ, ಜುಲೈ, 10: ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸರ್ಕಾರ ಮತ್ತೊಂದು ಜವಾಬ್ದಾರಿ ಕೊಟ್ಟು ಬುಧವಾರ (ಜುಲೈ 10) ಆದೇಶ ನೀಡಿದ್ದು, ಜಿಲ್ಲಾಧಿಕಾರಿ ಜೊತೆಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಿರ್ದೇಶಕರಾಗಿ ನೇಮಕ ಮಾಡಿದೆ.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ಕೇಂದ್ರ ಸ್ಥಾನ ಮೈಸೂರಿನಲ್ಲಿದ್ದು, (ANSSIRD) ಚಾಮರಾಜನಗರ ಜಿಲ್ಲಾಧಿಕಾರು ಅವರನ್ನು ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ಕೊಡಲಾಗಿದೆ.

ಕಳೆದ 1 ವಾರದಿಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಚಾಮರಾಜನಗರ ಡಿಸಿಗೆ ಹೆಚ್ಚುವರಿ ಜವಾಬ್ದಾರಿ ಕೊಡಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರ ಜಿಲ್ಲಾ ಪಂಚಾಯತಿ ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ಹಣದ ಕೊರತೆ ಇಲ್ಲ: ಬಜೆಟ್‌ನಲ್ಲಿ ಘೋಷಿಸಿದ ಯಾವುದೇ ಕಾರ್ಯಕ್ರಮಕ್ಕೂ ಕೂಡ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಚುನಾವಣೆ ವೇಳೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಜಾರಿಯಾಗಲ್ಲ ಎನ್ನುತ್ತಿದ್ದರು. ಈಗ, ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು.
ಗಡಿಜಿಲ್ಲೆ ಜೊತೆ ರಾಜಕೀಯ ಸಂಬಂಧ ನಿನ್ನೆ- ಮೊನ್ನೆಯದಲ್ಲ, 40 ವರ್ಷಗಳ ಒಡನಾಟವಿದೆ. ಎಲ್ಲಾ ಸಂದರ್ಭದಲ್ಲೂ ನನಗೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡುತ್ತಿದ್ದೀರಿ. ನಿಮ್ಮ ಋಣ ತೀರಿಸುವ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡಿದ್ದೇವೆ. ಚಾಮರಾಜನಗರಕ್ಕೆ ಬಂದ ಬಳಿಕ ನಾನು ಎರಡನೇ ಬಾರಿ ಸಿಎಂ ಆಗಿದ್ದೇನೆ ಎಂದರು.
ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದರೂ ಬಡವರ, ದಲಿತರು, ಮಹಿಳೆಯರ ಪರ ಕೆಲಸ ಮಾಡಲಿದೆ. ಕೃಷಿ, ಆರ್ಥಿಕತೆ, ಕೈಗಾರಿಕೆ ಬೆಳವಣಿಗೆ ಆಗಿರುವುದು ಕಾಂಗ್ರೆಸ್‌ನಿಂದ. ಬಿಜೆಪಿಯವರ ಬೊಗಳೆಗಳನ್ನು ಜನರು ನಂಬುವುದಿಲ್ಲ. ಅಭಿವೃದ್ಧಿ ಮಾಡದ ಬಿಜೆಪಿ ಅವರಿಗೆ ಆರೋಪಿಸುವ ನೈತಿಕತೆಯೇ ಇಲ್ಲ. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡುವುದು ಬಿಜೆಪಿ ಅವರ ಕಸುಬು ಎಂದು ಕಿಡಿಕಾರಿದರು.
ಈ ಬಾರಿ ಎಂಪಿ, ಸಚಿವರಿಗೆ ಮನವಿ ಮಾಡಿದ್ದೀನಿ, ಕರ್ನಾಕಟದ ಪರ ದ್ವನಿ ಎತ್ತಿ, ಸಂಸತ್‌ನಲ್ಲಿ ಧ್ವನಿ ಎತ್ತಿ ಎಂದಿದ್ದೇನೆ. ಕಳೆದ ಬಾರಿ 25 ಮಂದಿ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾದರೂ ಮಾತನಾಡಲಿಲ್ಲ ಎಂದರು.
ಈ ಬಾರಿ ಚುನಾವಣೆಯಲ್ಲಿ ನಿಜವಾಗಿ ಸೋತಿರುವವರು ಬಿಜೆಪಿಯವರು. ಕಳೆದ ಬಾರಿ ಪಡೆದಿದ್ದ ಸ್ಥಾನಗಳನ್ನು ಈ ಬಾರಿ ಕಳೆದುಕೊಂಡಿದ್ದಾರೆ ಎಂದರು.
2 ಬಾರಿ ನಿದ್ರೆಗೆ ಜಾರಿದ ಸಿಎಂ: ವೇದಿಕೆಯಲ್ಲಿ ಎರಡು ಬಾರಿ ಮುಖ್ಯಮಂತ್ರಿ ನಿದ್ರೆಗೆ ಜಾರಿದ ಘಟನೆ ನಡೆಯಿತು. ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡುತ್ತಿದ್ದ ವೇಳೆ ಎರಡು ಬಾರಿ ನಿದ್ರೆಗೆ ಜಾರಿದ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು ಬಂದ ಅಭಿಮಾನಿಗಳು ನಿದ್ರಾಭಂಗ ಮಾಡಿದರು. ಸಿದ್ದರಾಮಯ್ಯ ಭಾಷಣ ಮಾಡುವಾಗ ಸಚಿವ ಕೆ.ಎಚ್. ಮುನಿಯಪ್ಪ ಕೂಡ ನಿದ್ರೆಗೆ ಜಾರಿದ್ದರು.
ಬಿಜೆಪಿಗೆ ಸಂಸದ ಸುನೀಲ್ ಬೋಸ್ ಠಕ್ಕರ್: ಕೃತಜ್ಞತಾ ಸಭೆಯಲ್ಲಿ ಸಂಸದ ಸುನಿಲ್ ಬೋಸ್ ಮಾತನಾಡಿ, ಶಾಸಕರು,ಮಾಜಿ ಶಾಸಕರು ಹಾಗೂ ಮುಖಂಡರು ಅವರೇ ಚುನಾವಣೆಗೆ ನಿಂತಿರುವ ರೀತಿ ಕೆಲಸ ಮಾಡಿದ್ದರಿಂದ ನನಗೆ ಐತಿಹಾಸಿಕ ಗೆಲುವು ಸಿಕ್ಕಿದೆ. ಎಲ್ಲರಿಗೂ ಕೂಡ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಕೈ ಮುಗಿದರು.
ಐತಿಹಾಸಿಕ ಗೆಲುವು ನನಗೆ ಹೊಸ ಜವಾಬ್ದಾರಿ ಕೊಟ್ಟಿದೆ. ಎಲ್ಲರ ವಿಶ್ವಾಸದಿಂದ ಉತ್ತಮ ಕೆಲಸ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಸಂವಿಧಾನ ವಿರೋಧಿ ಬಿಜೆಪಿಗೆ ಈ ಚುನಾವಣೆಯ ಜನರು ಉತ್ತರ ಕೊಟ್ಟಿದ್ದಾರೆ. ನಾನು ಟಿಕೆಟ್ ಕೇಳಿದ ಬಳಿಕ ಅಪಪ್ರಚಾರ ಮಾಡಿದರು. ನಾಮಪತ್ರ ಸಲ್ಲಿಕೆಗೂ ಬಂದಾಗ ಅಪಪ್ರಚಾರ ಮಾಡಿದರು. ಒಂದು ತಿಂಗಳಾದರೂ ಬಂದಿಲ್ಲ ಅಂತಾ ಅಪಪ್ರಚಾರ ಮಾಡಿದ್ದು, ಇದಕ್ಕೆಲ್ಲಾ ನನ್ನ ಕೆಲಸ ಉತ್ತರ ಕೊಡಲಿದೆ ಎಂದರು.
ನನ್ನ ಕ್ಷೇತ್ರದ ಜನರು ಈಗ ಒಂದನೇ ತರಗತಿಗೆ ಅಡ್ಮಿಷನ್ ಕೊಟ್ಟಿದ್ದಾರೆ. ಒಂದು ವರ್ಷದವರೆಗೂ ಕೂಡ ಅವಕಾಶ ಮಾಡಿಕೊಡಿ ನನ್ನ ರಿಪೋರ್ಟ್ ಕಾರ್ಡ್ ಕೊಡ್ತೀನಿ. ನಂತರ ನನ್ನ ಬಗ್ಗೆ ಅಪಪ್ರಚಾರ ಮಾಡಿ ಅಂತಾ ಸವಾಲ್ ಹಾಕಿದರು.












Click it and Unblock the Notifications