ತಮಿಳುನಾಡಿನ ಗುಮಟಾಪುರದಲ್ಲಿ ಕನ್ನಡಿಗರಿಂದ ವಿಶೇಷ ಹಬ್ಬ ಆಚರಣೆ, ಇದರ ವಿಶೇಷತೆ ತಿಳಿಯಿರಿ
ಚಾಮರಾಜನಗರ, ನವೆಂಬರ್, 16: ಚಾಮರಾಜನಗರ ಜಿಲ್ಲೆಯ ಗಡಿಯಂಚಿನಲ್ಲಿರುವ ತಮಿಳುನಾಡಿನ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯ್ತು. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.
ಜಾತಿ, ವಯಸ್ಸಿನ ಬೇಧವಿಲ್ಲದೇ ಸಗಣಿಯಾಟ
ಅಚ್ಚ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಬಲಿಪಾಡ್ಯಮಿಯ ಮಾರನೆ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆಯೇ ಈ ವರ್ಷವೂ ಸಹ ಸಂಪ್ರದಾಯದಂತೆ ಗೊರೆ ಹಬ್ಬ ಆಚರಿಸಲಾಗಿದೆ. ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಹಬ್ಬದ ದಿನ ಬೆಳಿಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗೂ ಟ್ರಾಕ್ಟರ್‌ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ.

ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ ಹಣೆಗೆ ನಾಮ ಬಳಿದು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಹೀಗೆ ಕತ್ತೆಯ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ. ಕೊಂಡಕಾರ ಎಂದರೆ ಸುಳ್ಳುಗಾರ, ಚಾಡಿಕೋರ ಎಂದರ್ಥ.
ಹಿಂದೆ ಸುಳ್ಳು ಹೇಳುವ ವ್ಯಕ್ತಿ ಗ್ರಾಮದ ಜನರಲ್ಲಿ ದ್ವೇಷಾಸೂಯೆ ಮೂಡಿಸಿ ಅಶಾಂತಿಗೆ ಕಾರಣವಾಗಿದ್ದ ಎನ್ನಲಾಗಿದೆ. ಅಂತಹ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಸಂಕೇತವಾಗಿ ಇಬ್ಬರಿಗೆ ಚಾಡಿಕೋರರ ವೇಷ ಧರಿಸಿ ಕತ್ತೆಯ ಮೇಲೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸಗಣಿ ರಾಶಿ ಬಳಿ ಗ್ರಾಮದ ಜನ ಜಮಾಯಿಸುತ್ತಾರೆ. ಆಗ ನೋಡಿ ಶುರುವಾಗುತ್ತೆ ಸಗಣಿಯಾಟ.
ಸಗಣಿ ರಾಶಿಯಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುತ್ತಾರೆ. ದೊಡ್ಡ ದೊಡ್ಡ ಸಗಣಿ ಮುದ್ದೆಗಳನ್ನು ಮಾಡಿ ಒಬ್ಬರ ಮೇಲೆ ಒಬ್ಬರು ಸಗಣಿ ಮುದ್ದೆಗಳನ್ನು ಎತ್ತಿ ಹಾಕಿ ಖುಷಿಪಡುತ್ತಾರೆ. ನಿಜಕ್ಕೂ ಸಗಣಿಯ ದೊಡ್ಡ ದೊಡ್ಡ ಮುದ್ದೆಗಳನ್ನು ಕಟ್ಟುವ ರೀತಿ, ಅದನ್ನು ಪ್ರಾಯಾಸದಿಂದ ಮೇಲಕ್ಕೆತ್ತಿ ಮತ್ತೊಬ್ಬರ ಮೇಲೆ ಎತ್ತಿ ಹಾಕುವ ದೃಶ್ಯ ನಿಜಕ್ಕೂ ಎಂತಹವರಲ್ಲೂ ನಗೆ ತರಿಸುತ್ತದೆ.
ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಈ ಸಗಣಿಯಾಟವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು, ಬೇರೆ ಜಿಲ್ಲೆಯ ಜನರೂ ಜಮಾಯಿಸುತ್ತಾರೆ. ಸುತ್ತಲೂ ನೆರೆಯುವ ಜನರ ಮುಗಿಲು ಮುಟ್ಟುವ ಕಿರುಚಾಟ, ಘೋಷಣೆಗಳು ಗೊರೆ ಕಟ್ಟುವವರ ಉತ್ಸಾಹವನ್ನು ಹಿಮ್ಮಡಿಗೊಳಿಸುತ್ತದೆ.
ಧಾರ್ಮಿಕ ನಂಬಿಕೆ ಸಾರುವ ಹಬ್ಬ
ಹೀಗೆ ಸಗಣಿಯಿಂದ ಹೊಡೆದಾಡಿದರೆ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆಯೂ ಇದೆ. ಬೀರೇಶ್ವರನಿಗೆ ಹರಕೆ ಹೊತ್ತವರು ಸಹ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಮನದ ಬಯಕೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಈ ಹಬ್ಬ ಆಚರಿಸಲು ಒಂದು ಹಿನ್ನೆಲೆಯು ಇದೆ.
ಹಿಂದೆ ಊರ ಗೌಡರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿ ಮಹಾಶಿವನ ಭಕ್ತನಾಗಿದ್ದನಂತೆ. ಆತನ ಮರಣದ ನಂತರ ಆತನ ವಿಭೂತಿ, ರುದ್ರಾಕ್ಷಿ ಹಾಗೂ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತಂತೆ. ಕಾಲಾನಂತರ ಗೊಬ್ಬರಕ್ಕಾಗಿ ತಿಪ್ಪೆ ಅಗೆಯುತ್ತಿದ್ದಾಗ ಆ ಸ್ಥಳದಲ್ಲಿ ಲಿಂಗವೊಂದು ಉದ್ಭವವಾಗಿರುವುದು ಗೋಚರಿಸಿತು ಎಂಬ ನಂಬಿಕೆಯಿದೆ. ನಂತರ ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಅಂದಿನಿಂದ ಪ್ರತಿ ವರ್ಷ ಇಲ್ಲಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.
ಸಗಣಿಯಾಟದಲ್ಲಿ ಜಾತಿ-ಬೇಧ ಹಾಗೂ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಗಣಿಯಾಟಕ್ಕೂ ಮೊದಲು ದಲಿತ ವ್ಯಕ್ತಿಯೇ ಮೊದಲ ಪೂಜೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಪ್ರತಿ ವರ್ಷ ತಪ್ಪದೆ ಗೊರೆಹಬ್ಬ ಮಾಡುವುದರಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಮಳೆಬೆಳೆ ಚನ್ನಾಗಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ಮೇಲ್ನೋಟಕ್ಕೆ ವಿಚಿತ್ರ ಸಂಪ್ರದಾಯದಂತೆ ಕಂಡುಬರುವ ಈ ಆಚರಣೆಯ ಹಿಂದೆ ಧಾರ್ಮಿಕ ನಂಬಿಕೆಯಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications