ಸಾಲದ ಸುಳಿಗೆ ಸಿಲುಕಿ ಇಡೀ ಕುಟುಂಬವೇ ಬಲಿಯಾಯ್ತು!

Posted By:
Subscribe to Oneindia Kannada

ಚಾಮರಾಜನಗರ, ನವೆಂಬರ್ 1: ಮಾಡಿದ ಸಾಲವನ್ನು ತೀರಿಸಲಾಗದೆ ಇಡೀ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ಳೇಗಾಲದ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಆನಂದ, ಪತ್ನಿ ಶೋಭಾ(25), ಮಕ್ಕಳಾದ ಮಂಟೇಸ್ವಾಮಿ(4), ಮಂಟೇಲಿಂಗ(2) ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

Four members of family committed suicide over debt

ಆನಂದ ಖಾಸಗಿ ಬಸ್‍ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ತನ್ನ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಾಗ ಸಾಲ ಮಾಡುತ್ತಿದ್ದನು. ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ ಅಸಲಿಗೆ ಬಡ್ಡಿ, ಚಕ್ರಬಡ್ಡಿ ಎನ್ನುತ್ತಾ ಸಾಲದ ಮೊತ್ತ ಏರುತ್ತಾ ಹೋಗತೊಡಗಿತು.

ಸಾಲಕೊಟ್ಟವರು ವಾಪಾಸ್ಸು ನೀಡುವಂತೆ ಕಿರುಕುಳ ನೀಡತೊಡಗಿದರು. ಇದರಿಂದ ಬೇಸತ್ತ ಆನಂದನಿಗೆ ಜೀವನವೇ ಜಿಗುಪ್ಸೆಯಾಗಿತ್ತು. ನಾಲ್ಕು ಮಂದಿಯ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುವುದೇ ಕಷ್ಟವಾಗಿ ಕಾಣತೊಡಗಿತು. ಹೀಗಾಗಿ ಹೆಂಡತಿಯೊಂದಿಗೆ ಸಾಯುವ ಮಾತನಾಡಿದ್ದಾನೆ.

ಸಾಲಗಾರರ ಕಾಟದಲ್ಲಿ ಬದುಕೋದಕ್ಕಿಂತ ಸಾಯುವುದಾದರೆ ಎಲ್ಲರೂ ಸತ್ತು ಬಿಡೋಣ ಎಂಬ ತೀರ್ಮಾನಕ್ಕೆ ಗಂಡಹೆಂಡತಿ ಬಂದಿದ್ದಾರೆ.

ಆದರೆ ಆನಂದ ಹೆಂಡತಿಗೆ ಏನೂ ಹೇಳದೆ ತಾನೇ ವಿಷ ಮಿಶ್ರಿತ ಆಹಾರವನ್ನು ನೀಡಿದ್ದಾನೆ. ಹೆಂಡತಿ ಮತ್ತು ಮುಗ್ಧ ಮಕ್ಕಳು ಖುಷಿಯಾಗಿಯೇ ತಿಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಅಸ್ವಸ್ಥಗೊಂಡು ಸಾವುಬದುಕಿನತ್ತ ಒದ್ದಾಡುತ್ತಾ ಕಿರುಚಾಡಿದ್ದಾರೆ.

ಇದನ್ನು ನೋಡಲಾಗದೆ ಆನಂದ ಮನೆಯ ಬಾಗಿಲು ಹಾಕಿಕೊಂಡು ಹೊರಬಂದಿದ್ದಾನೆ. ಬಳಿಕ ತಾನು ಕೂಡ ವಿಷ ಸೇವಿಸಿದ್ದಾನೆ.

ಅಷ್ಟರಲ್ಲೇ ಈ ವಿಷಯ ಸುತ್ತಮುತ್ತಲಿನವರಿಗೆ ಗೊತ್ತಾಗಿದ್ದು ಅವರು ಮನೆಗೆ ಬಂದು ನೋಡುವ ವೇಳೆಗೆ ಶೋಭಾ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ವಿಷ ಸೇವಿಸಿ ಒದ್ದಾಡುತ್ತಿದ್ದ ಆನಂದನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಈ ಸಂಬಂಧ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದೀಪಾವಳಿ ಸಮಯದಲ್ಲಿ ಸಂತಸ ಸಂಭ್ರಮದಿಂದ ಬೆಳಗಬೇಕಾಗಿದ್ದ ಮನೆಯೊಂದು ಸಾಲದ ಸುಳಿಗೆ ಸಿಕ್ಕಿ ಕತ್ತಲಾಗಿದೆ.

ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು:

ಮತ್ತೊಂದು ಪ್ರಕರಣದಲ್ಲಿ ಮಹದೇಶ್ವರ ಬೆಟ್ಟದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ವೇಳೆ ಅದನ್ನು ವೀಕ್ಷಣೆ ಮಾಡುತ್ತಿದ್ದ ಬಾಲಕ ಮನೋಜ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಮಹದೇಶ್ವರ ಸ್ವಾಮಿಯ ತೆಪ್ಪೋತ್ಸವ ವೀಕ್ಷಣೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹದೇಶ್ವರಬೆಟ್ಟ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Struggling with debts, four members of a family committed suicide at their house in Chikkalloor village, Kollegala taluk, Chamarajanagar district.
Please Wait while comments are loading...