ಬಿಆರ್‌ಟಿ ಅರಣ್ಯದಲ್ಲಿ ಲಂಟಾನಾ ಕಾಟ ತಪ್ಪಿಸಲು ಬಂತು ಯಂತ್ರ!
ಚಾಮರಾಜನಗರ, ಜು4: ಜೀವ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಕಾಡಿನ ಕಳೆ ಲಂಟಾನಾ ನಾಶಕ್ಕೆ ಯಂತ್ರವೊಂದನ್ನು ಇದೇ ಮೊದಲ ಬಾರಿಗೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಳಸಲಾಗುತ್ತಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವಲಯದಲ್ಲಿ ಲಂಟಾನಾ ತೆರವಿಗೆ ಈ ಯಂತ್ರವನ್ನು ಉಪಯೋಗಿಸಲಾಗುತ್ತಿದೆ. ಟ್ರಕ್ (The Real Elephant Collective) ಎಂಬ ಸರ್ಕಾರೇತರ ಸಂಸ್ಥೆಗೆ ಲಂಟಾನ ತೆರವಿನ ಗುತ್ತಿಗೆ ನೀಡಿದ್ದು ಕಳೆದ 20-25 ದಿನಗಳಿಂದ 25 ಹೆಕ್ಟೇರ್ ಜಾಗ ಗುರುತಿಸಿ ಅದರಲ್ಲಿ 1 ಹೆಕ್ಟೇರ್ ಪ್ರದೇಶಲ್ಲಿ ಯಂತ್ರದ ಮೂಲಕ ಲಂಟಾನಾ ಕಡಿದು, ಬೇರು ಕೀಳಲಾಗುತ್ತಿದೆ.
ಯಂತ್ರದ ಕಾರ್ಯ ಹೇಗೆ?; ಲಂಟಾನಾ ಕಡ್ಡಿಗಳನ್ನು ಕಡಿದು ಯಂತ್ರಕ್ಕೆ ಹಾಕಿದರೇ ಕಡ್ಡಿಗಳನ್ನು ಪುಡಿಗಟ್ಟಿ, ಬೀಜ ಪ್ರಸಾರ ಆಗದಂತೆ ಮಾಡಲಾಗುತ್ತದೆ. ಹಿಟಾಚಿ ಥರದ ಯಂತ್ರದ ಮೂಲಕ ಲಂಟಾನಾ ಬೇರನ್ನು ಕಿತ್ತು ಅದನ್ನು ಪುಡಿಗಟ್ಟಿ ಲಂಟಾನಾ ಕಳೆ ಸಂಪೂರ್ಣ ನಾಶವಾಗುವ ಕೆಲಸ ಮಾಡಲಿದೆ ಯಂತ್ರ.

ಕಡಿಮೆ ಮಾನವಶಕ್ತಿ ಬಳಕೆಯಾಗುವ ಜೊತೆ ಸಮಯದ ಉಳಿತಾಯ, ಬೀಜ ಪ್ರಸಾರದ ತಡೆ ಈ ಯಂತ್ರದಿಂದ ಸಾಧ್ಯ ಎಂದು ಟ್ರಕ್ ಜಿಲ್ಲಾ ಸಂಯೋಜಕ ಮಹೇಶ್ ತಿಳಿಸಿದ್ದಾರೆ. ಲಂಟಾನಾದ ಗಿಡಗಳ ಪುಡಿಯನ್ನು ಕೊಳೆ ಹಾಕಿದರೇ ಗೊಬ್ಬರವಾಗಿ ಬಳಕೆಯಾಗಲಿದ್ದು ಲಂಟಾನಾ ತೆರವಿನ ಜಾಗದಲ್ಲಿ ಅರಣ್ಯ ಇಲಾಖೆ ಕಾಡಿನ ಜಾತಿ ಸಸ್ಯಗಳನ್ನು ಬೆಳೆಸಲಿದೆ. 100 ಹೆಕ್ಟೇರ್ ಪ್ರದೇಶದಲ್ಲಿ ಲಂಟಾನಾ ತೆರವುಗೊಳಿಸುವ ಗುರಿ ಟ್ರಕ್ ಸಂಸ್ಥೆ ವಹಿಸಿಕೊಂಡಿದ್ದು ಲಂಟಾನಾ ತೆರವುಗೊಳಿಸಿದ ಜಾಗದಲ್ಲಿ ಮತ್ತೊಮ್ಮೆ ಬೆಳೆಯದಂತೆ ಮಾಡಲು ಈ ಯಂತ್ರ ಸಹಾಯಕ ಎಂದರು.
ಲಂಟಾನಾ ತಂದಿಟ್ಟಿರುವ ಫಜೀತಿ; ಬ್ರಿಟಿಷರ ಕಾಲದಲ್ಲಿ ಅಲಂಕಾರಿಕ ಸಸ್ಯವಾಗಿ ದೇಶಕ್ಕೆ ಬಂದ ಲಂಟಾನಾ ಗಿಡ ಈಗ ಕಾಡಿನ ಕಳೆಯಾಗಿ ಮಾರ್ಪಟ್ಟಿದೆ. ಕನಿಷ್ಠ ನೀರಿನಲ್ಲಿ ಬೆಳೆಯುವ ಸಾಮಾರ್ಥ್ಯ ಇರುವ ಈ ಲಂಟಾನಾ ಹೂ ನೋಡಲು ಸುಂದರವಾಗಿರುತ್ತದೆ, ಆದರೆ ಇದು ಸೃಷ್ಟಿಸಿರುವ ಅವಾಂತರ ಭೀಕರವಾಗಿದೆ.
ಲಂಟಾನಾದ ಬೀಜ ಪ್ರಸಾರ ಅತಿವೇಗವಾಗಿ ಆಗಲಿದ್ದು ಲಂಟಾನಾ ಬೆಳೆದ ಕಡೆ ಬೇರೆ ಯಾವ ಗಿಡಗಳು ಬೆಳೆಯಲು ಅವಕಾಶವಿಲ್ಲ, ಗರಿಕೆಯೂ ಹುಟ್ಟಲ್ಲ. ಯಾವ ಪ್ರಾಣಿಗೂ ಇದು ಮೇವಾಗಿ ಕೂಡ ಇಲ್ಲವಾದ್ದರಿಂದ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈ ಕಳೆಯೇ ಪಾರುಪತ್ಯ ಮೆರೆದು ಪ್ರಾಣಿ ಸಂಕುಲಕ್ಕೆ ಮಾರಕವಾಗಿದೆ.

ಲಂಟಾನಾ ನೋಡಲಿಕ್ಕೆ ಸುಂದರ; 18 ನೇ ಶತಮಾನದಲ್ಲಿ ಯೂರೋಪಿಯನ್ನರು ವಿಶ್ವದೆಲ್ಲೆಡೇ ತಮ್ಮ ವಸಾಹತುಗಳ ವಿಸ್ತರಣೆಯಲ್ಲಿ ತೊಟಗಿದ್ದರು. ಮರುಭೂಮಿಯಲ್ಲಿ ಬೆಳೆಯುತ್ತಿದ್ದ ಲಂಟಾನಾ ಕಮಾರಾದ ವರ್ಣಮಯ ಹೂಗಳು ಅವರಲ್ಲಿ ಆಕರ್ಷಣೆ ಮೂಡಿಸಿದ್ದವು. ಅವರ ಮನೆಯ ಮುಂಭಾಗ ಕೈತೋಟ, ಉದ್ಯಾನಗಳಲ್ಲಿ ಲಂಟಾನಾ ಆಲಂಕಾರಿಕ ಸಸ್ಯವಾಗಿ ನೆಲೆ ಗಿಟ್ಟಿಸಿತು.
ಲಂಟಾನಾ ನೋಡಲಿಕ್ಕೆ ಸುಂದರವಾಗಿ ಕಾಣಿಸುವ ಈ ಸಸ್ಯದ ಪರಿಣಾಮ ಮಾತ್ರ ಕಲ್ಪಿಸಿಕೊಳ್ಳಲು ಆಗದಷ್ಟು ಭೀಕರ, ಪ್ರಕೃತಿಯಲ್ಲಿನ ಸಮತೋಲನವನ್ನು ಹಾಳುಗೆಡವಿ, ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಮಾರ್ಥ್ಯ ಇದರದು.
ಬಿಆರ್‌ಟಿ ಪ್ರದೇಶದಲ್ಲಿ 1997 ರಲ್ಲಿ ಶೇ. 4.3 ರಷ್ಟಿತ್ತು 2008ರಲ್ಲಿ ಇದರ ಪ್ರಮಾಣ ಶೇ. 33 ಆಗಿತ್ತು. ಇದರ ಪ್ರಮಾಣ ಹೆಚ್ಚಾದಂತೆಲ್ಲಾ ಉಳಿದ ಸಸ್ಯ ಪ್ರಭೇದ ಪ್ರಮಾಣ ಕಡಿಮೆಯಾಗಿ ಅಸಮತೋಲನಕ್ಕೆ ಎಡೆ ಮಾಡಿಕೊಡುತ್ತಿದೆ.
ಲಂಟಾನಾದಿಂದ ಆನೆ, ಸೋಫಾ ಸೇರಿದಂತೆ ಅಲಂಕಾರಿಕ ವಸ್ತುಗಳು, ಪೀಠೋಪಕರಣಗಳನ್ನು ಇತ್ತಿಚಿನ ವರ್ಷಗಳಲ್ಲಿ ತಯಾರಿಸುತ್ತಿದ್ದರೂ ಇದರ ಪ್ರಮಾಣವೇನೂ ಕಡಿಮೆಯಾಗಿಲ್ಲ. ಈಗ ಯಂತ್ರದ ಮೂಲಕ ಇದರ ತೆರವು ಮಾಡುತ್ತಿರುವುದರಿಂದ ಲಂಟಾನಾ ಕಾಡಿನಿಂದ ಕಾಲ್ಕೀಳುವುದೋ ಇಲ್ಲಾ ಬೀಜಾಸುರನಂತೆ ಜನ್ಮ ತಾಳುವುದೋ ಕಾದು ನೋಡಬೇಕಿದೆ.












Click it and Unblock the Notifications