ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಸಾವು ಪ್ರಕರಣ; ಅರಣ್ಯ ಇಲಾಖೆಯಿಂದ ತನಿಖೆ ಚುರುಕು
ಚಾಮರಾಜನಗರ, ಜೂನ್ 27: ಗಡಿಜಿಲ್ಲೆ ಚಾಮರಾಜನಗರದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಹಲವು ಮಂದಿ ಸಾವನ್ನಪ್ಪಿರುವ ಉದಾಹರಣೆಗಳಿವೆ. ಆದರೆ, ಇದೀಗ ಜಿಲ್ಲೆಯ ಹಾನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಐದು ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಭರವಸೆ ನೀಡಿದೆ. ಇನ್ನು ಸಾವನ್ನಪ್ಪಿದ ಹುಲಿಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ವರದಿ ಕೈಸೇರಿದ ಬಳಿಕ ಘಟನೆಗೆ ನಿಖರ ಕಾರಣ ಏನೆಂದು ಬಯಲಾಗಲಿದೆ.

ಐದು ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈಗಾಗಲೇ ಭರವಸೆ ನೀಡಿದೆ. ಇನ್ನು ಸಾವನ್ನಪ್ಪಿದ ಹುಲಿಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ವರದಿ ಕೈಸೇರಿದ ಬಳಿಕ ಘಟನೆಗೆ ನಿಖರ ಕಾರಣ ಏನೆಂದು ಬಯಲಾಗಲಿದೆ.
ಹುಲಿಗಳ ಸಾವು ಪ್ರಕರಣ ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರೆಲ್ಲರನ್ನೂ ವಿಚಾರಣೆ ಮಾಡಲಾಗುತ್ತದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಸುವಿನ ಕಳೇಬರದ ಬಳಿ ಕರೆದುಕೊಂಡು ಹೋಗಿ ಯಾರು ಅದರ ಮಾಲೀಕರು ಅಂತಲೂ ವಿಚಾರಣೆ ಮಾಡಲಾಗುತ್ತಿದೆ.
ಹುಲಿಗಳ ಮೃತದೇಹಗಳು ಲಭ್ಯವಾದ ಸ್ಥಳದಲ್ಲಿಯೇ ಹಸುವಿನ ಶವ ಸಹ ಸಿಕ್ಕಿದೆ. ಈ ಹಿನ್ನೆಲೆ ಹುಲಿಗಳಿಗೆ ವಿಶಪ್ರಾಷನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಹಸುವಿನ ಮೃತ ದೇಹದ ಬಾಲ ತುಂಡಾಗಿರುವುದು ಕಂಡುಬಂದಿದೆ. ಆದ್ದರಿಂದ ಸಾವನ್ನಪ್ಪಿರುವ ಹಸುವಿಗೆ ವಿಷ ಸಿಂಪಡಿಸಿರುವ ಸಾಧ್ಯತೆಯಿದೆ. ಅದನ್ನು ತಿಂದು ಹುಲಿ ಮತ್ತು ಹುಲಿ ಮರಿಗಳು ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಬರುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ನಂತರ ಸತ್ಯ ಏನೆಂಬುದು ಗೊತ್ತಾಗಲಿದೆ.
ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಮೃತದೇಹಗಳು ಕಂಡುಬಂದಿದ್ದವು. ಬುಧವಾರ ಅರಣ್ಯಸಿಬ್ಬಂದಿ ಗಸ್ತಿನ ವೇಳೆ ಹುಲಿಗಳ ಮೃತದೇಹಗಳು ಪತ್ತೆ ಆಗಿದ್ದು ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡುಬಂದಿದಿದೆ.
ಹುಲಿಗಳು ಒಮ್ಮಲೇ ಮೃತಪಟ್ಟಿರುವ ವಿಚಾರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಆದೇಶಿಸಿದ್ದಾರೆ.
ಇದೀಗ ಸದ್ಯ ಕೆಲವರನ್ನು ತನಿಖಾ ತಂಡ ತನಿಖೆ ನಡೆಸುತ್ತಿದೆ. ಪಿಸಿಸಿಎಫ್ ರವಿ, ಎಪಿಸಿಸಿಎಫ್ ಶ್ರೀನಿವಾಸಲು,ಸಿಎಫ್ ಹೀರಾಲಾಲ್, ಎನ್ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹಾಗೂ ಮೈಸೂರು ಮೃಗಾಲಯದ ಪಶು ವೈದ್ಯಾಧಿಕಾರಿಕಾರಿ ಈ ತಂಡದಲ್ಲಿದ್ದಾರೆ. 14 ದಿನಗಳೊಳಗೆ ವರದಿ ಸಲ್ಲಿಕೆ ಮಾಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಇಷ್ಟು ದಿನ ಜಿಲ್ಲೆಯಲ್ಲಿ ವ್ಯಕ್ತಿಗಳ ಮೇಳೆ ಕಾಡು ಪ್ರಾಣಿಗಳು ದಾಳಿ ನಡೆಸಿ ಕೊಂದಿರುವ ಹಾಗೂ ಗಾಯಗೊಳಿಸಿರುವ ಘಟನೆಗಳು ನಡೆದಿದ್ದವು. ಆದರೆ ಇದೀಗ ವಿಚಿತ್ರವೆಂಬಂತೆ ಹುಲಿಗಳೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications