ಚಾಮರಾಜನಗರ; ERSS ಸೇವೆ ರಾಜ್ಯದಲ್ಲೇ ಮೊದಲು
ಚಾಮರಾಜನಗರ, ಮೇ 29: ಎಲ್ಲಾ ಆದ ನಂತರ ತಡವಾಗಿ ಬರುವುದು ಪೊಲೀಸರು ಎಂಬ ಅಪವಾದಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸರು ವಿರುದ್ಧ ನಡೆ ತೋರಿ ಕರೆ ಮಾಡಿದ ಸರಾಸರಿ 18 ನಿಮಿಷದಲ್ಲೇ ಸೇವೆ ನೀಡುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಜನವರಿ-ಮಾರ್ಚ್‌ನ ಇಆರ್‌ಎಸ್‌ಎಸ್ ತುರ್ತು ಸ್ಪಂದನ ಸಹಾಯಯೋಜನೆ ಅಂಕಿ ಅಂಶದ ಪ್ರಕಾರ ಇಡೀ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸರು ದೂರುದಾರರು ಕರೆ ಮಾಡಿದ ಸರಾಸರಿ 18.20 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತೆರಳಿ ಸ್ಪಂದಿಸುತ್ತಿದ್ದಾರೆ.
ರಾಯಚೂರು ಸರಾಸರಿ 18.27 ನಿಮಿಷದಲ್ಲಿ ಸ್ಪಂದಿಸುವ ಮೂಲಕ ಎರಡನೇ ಸ್ಥಾನ, ಮಹಾನಗರಗಳ ಪೈಕಿ ಬೆಂಗಳೂರು ಸಿಟಿ ಪೊಲೀಸರು ಮೊದಲ ಸ್ಥಾನ, ಮೈಸೂರು ಎರಡನೇ ಸ್ಥಾನದಲ್ಲಿದೆ.

ಕುಡಿದು ಗಲಾಟೆ, ಅಪಘಾತ, ಕೌಟುಂಬಿಕ ಕಲಹ, ಶಬ್ಧ ಮಾಲಿನ್ಯ, ಕಳ್ಳತನ, ಆತ್ಮಹತ್ಯೆಗೆ ಯತ್ನ ಹೀಗೆ ನಾನಾ ರೂಪದ ಸಮಸ್ಯೆ, ಅವಘಡಗಳಿಗೆ ಸ್ಪಂದಿಸಲು ಜಿಲ್ಲೆಯಲ್ಲಿ 10 ವಾಹನಗಳು ಕಾರ್ಯ ನಿರ್ವಹಿಸುತ್ತಿದೆ. ಕೆಲವೊಮ್ಮೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದವರನ್ನು ERSS ಪೊಲೀಸರು ರಕ್ಷಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೊಲೆ, ದರೋಡೆ, ಅಕ್ರಮ ಮದ್ಯ ಮಾರಾಟ, ಮಹಿಳೆ ಮತ್ತು ಹಿರಿಯ ನಾಗರಿಕರ ರಕ್ಷಣೆಯನ್ನೂ ಮಾಡುವ ಮೂಲಕ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಿದ್ದಾರೆ.

1936 ಕರೆ ಜಗಳ, ಕಲಹವೇ ಹೆಚ್ಚು; ಜನವರಿಯಿಂದ ಮಾರ್ಚ್ ತನಕ ಚಾಮರಾಜನಗರ ERSS ತುರ್ತು ಸಹಾಯವಾಣಿಗೆ 1936 ಕರೆಗಳು ಬಂದಿದ್ದು ಇವುಗಳಲ್ಲಿ 1473 ಸಾರ್ವಜನಿಕ ಸ್ಥಳಗಳಲ್ಲಿ ಗದ್ದಲ, ಜಗಳ, ಕೌಟುಂಬಿಕ ಕಲಹದ್ದಾಗಿದೆ. ಉಳಿದಂತೆ, ಅಪಘಾತಕ್ಕೆ ಸಂಬಂಧಿಸಿದಂತೆ 159, ಕಳ್ಳತನಕ್ಕೆ ಸಂಬಂಧಿಸಿದಂತೆ 40, ಜೂಜು, ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 106 ಕರೆಗಳಿಗೆ ಪೊಲೀಸರು ಸ್ಪಂದಿಸಿದ್ದಾರೆ.
ದೂರುದಾರರು ಕರೆ ಮಾಡಿದ ಸ್ಥಳಕ್ಕೆ ದೌಡಾಯಿಸುವ ಪೊಲೀಸರು ಕೌಟಂಬಿಕ ಸಮಸ್ಯೆ, ಕುಡುಕರ ರಂಪಾಟ, ಗಲಾಟೆ, ಜಮೀನು ವಿಚಾರಕ್ಕೆ ಕಲಹ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಿದ್ದು ಗಂಭೀರ ಪ್ರಕರಣಗಳಾದರೇ ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡಿ ಅವಶ್ಯಬಿದ್ದರೇ ವ್ಯಕ್ತಿಗಳನ್ನು ವಶಕ್ಕೆ ಕೊಡುತ್ತಾರೆ.
ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಟಿ. ಪಿ. ಶಿವಕುಮಾರ್ ಮಾತನಾಡಿ, "ಮೂರು ತಿಂಗಳಿನ ಅಂಕಿ-ಅಂಶದ ಪ್ರಕಾರ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು ರಾಜ್ಯದಲ್ಲೇ ಅತಿ ವೇಗವಾಗಿ ಸ್ಪಂದಿಸಿದರಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ತುರ್ತು ಸಹಾಯವಾಣಿಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು, ಈ ಸಂಬಂಧವಾಗಿಯೂ ಜಾಗೃತಿ ಮೂಡಿಸಲಾಗುತ್ತಿದೆ" ಎಂದರು.












Click it and Unblock the Notifications