ಚಾಮರಾಜನಗರ: ಕಾಲೇಜಿಗೆ ಕಾಲಿಟ್ಟ ಖದೀಮರ ಗ್ಯಾಂಗ್ ಕದ್ದಿದ್ದೇನು ಗೊತ್ತಾ?
ಚಾಮರಾಜನಗರ, ಜೂನ್, 27: ಚಿನ್ನದಂಗಡಿ, ಮಳಿಗೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ಕಾಲೇಜಿಗೂ ಎಂಟ್ರಿ ಕೊಟ್ಟಿದ್ದು, ಪರೀಕ್ಷಾ ಕೇಂದ್ರದ ಡಿವಿಆರ್, ಬ್ಯಾಟರಿ, ಟಿವಿಯನ್ನೇ ಹೊತ್ತೊಯ್ದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಸರ್ಕಾರಿ ಪಿಯು ಬಾಲಕರ ಕಾಲೇಜಿನಲ್ಲಿ ಈ ಕಳವು ಪ್ರಕರಣ ನಡೆದಿದ್ದು, ಉಪನ್ಯಾಸಕ ವರ್ಗ ಕಳವು ಘಟನೆಯಿಂದ ಸದ್ಯ ಆತಂಕಕ್ಕೀಡಾಗಿದ್ದಾರೆ.

ಗೇಟಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಪರೀಕ್ಷೆ ಮುನ್ನೆಚ್ಚರಿಕೆಗೆ ಅಳವಡಿಸಿದ್ದ ಸಿಸಿಟಿವಿ ಡಿವಿಆರ್ ಹಾಗೂ ಲಕ್ಷಾಂತರ ಮೌಲ್ಯದ 10 ಬ್ಯಾಟರಿಗಳು, ಎಲ್‌ಇಡಿ ಟಿವಿಯನ್ನು ಹೊತ್ತೊಯ್ದಿದ್ದಾರೆ.
ಪ್ರಸ್ತುತ ಪಿಯು-3 ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ 4 ವಿಷಯಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಡಿವಿಆರ್ ಕನ್ನ ಹಾಕಿರುವುದರಿಂದ ಪರೀಕ್ಷೆ ನಡೆದ ಪ್ರಮುಖ ದಾಖಲೆಯೇ ಇಲ್ಲದಂತಾಗಿದೆ.
ಪಿಯುಸಿ-3 ರ ಪರೀಕ್ಷೆಯಲ್ಲಿ ಈಗಾಗಲೇ 4 ವಿಷಯಗಳಿಗೆ ಎಕ್ಸಾಂ ಬರೆದಿರುವ ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ಕನ್ನ ಹಾಕಿರುವುದರಿಂದ ದಿಗಿಲುಗೊಂಡಿದ್ದಾರೆ.
ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ಕೊಟ್ಟು ತನಿಖೆ ನಡೆಸಿದ್ದಾರೆ. ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಚಾಮರಾಜನಗರ ಪಟ್ಟಣ ಠಾಣೆಗೆ ಈ ಸಂಬಂಧ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications