ಅಧಿಕಾರ ಕೊಟ್ಟಿರುವುದು ರೌಡಿಸಂ ಮಾಡೋದಿಕ್ಕಾ?: ಗುಂಡ್ಲುಪೇಟೆ ಎಂಎಲ್ಎ ವಿರುದ್ಧ ಮಾಜಿ ಶಾಸಕ ಕಿಡಿ
ಚಾಮರಾಜನಗರ, ಸೆಪ್ಟೆಂಬರ್, 23: ಕ್ರಶರ್‌ಗೆ ರಸ್ತೆ ಮಾಡಲು ದಲಿತರ ಜಮೀನನ್ನು ಕಬಳಿಸಿ, ಫಸಲು ನಾಶ ಮಾಡಿ 40 ಅಡಿ ರಸ್ತೆ ಮಾಡಲಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಮಾಜಿ ಶಾಸಕ ನಿರಂಜನ್ ಕುಮಾರ್ ಕಿಡಿಕಾರಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಇನ್ನೂ ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ-ಸಣ್ಣ ರೈತರ ಜಮೀನುಗಳಲ್ಲಿ ಫಸಲು ನಾಶ ಮಾಡಿ 40 ಅಡಿ ರಸ್ತೆ ಮಾಡಲಾಗಿದೆ. ಒಂದು ಕಡೆ ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಆಗುತ್ತಿದೆ. ಮತ್ತೊಂದೆಡೆ ದಲಿತರ ಫಸಲನ್ನು ಕಾಂಗ್ರೆಸ್ ಶಾಸಕ ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.

ಬಂಡಿದಾರಿ ಇತ್ತು ಎಂದು ಸರ್ಕಾರದ ಅನುದಾನದಲ್ಲಿ ಬಿಳಿಕಲ್ಲು ಕ್ರಶರ್‌ಗೆ ರಸ್ತೆ ಮಾಡಿಕೊಂಡಿದ್ದಾರೆ. ಇದಕ್ಕೆ ರೈತರ ಫಸಲು ನಾಶ ಮಾಡಿದ್ದಾರೆ. ಯಾರೂ ರಸ್ತೆ ಕೇಳದಿದ್ದರೂ ರೈತರ ಫಸಲು ನಾಶ ಮಾಡಿ ರಸ್ತೆ ಮಾಡಿದ್ದು ಕ್ರಶರ್‌ಗೆ. ಎಲ್ಲದರೂ ಬೇರೆ ದಾರಿ ಇದೆಯಾ? ಎಂದು ಪ್ರಶ್ನಿಸಿದರು.
ದಲಿತ ಸಣ್ಣ ಹಿಡುವಳಿದಾರರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಧಿಕಾರ ಕೊಟ್ಟಿರುವುದು ರೌಡಿಸಂ ಮಾಡೋಕಾ? ಎಂದು ಪ್ರಶ್ನಿಸಿದರು. ಇನ್ನು ರೈತರು ಅರ್ಜಿ ಕೊಟ್ಟರೆ ತಿರುಗಿ ನೋಡದ ತಹಶೀಲ್ದಾರ್ ತಾವೇ ನಿಂತು ರಸ್ತೆ ಮಾಡಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸ್ವಾಮೀಜಿ ಹೇಳಿದ್ದೇನು?: ಚಾಮರಾಜನಗರದ ಮದೀನಾ ಮಸ್ಜಿದ್‌ಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಹಾಗೂ ಮದೀನಾ ಮಸ್ಜಿದ್ ಆಶ್ರಯದಲ್ಲಿ ಸೀರತ್ ಪ್ರಯುಕ್ತ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ವಾಮೀಜಿಯೊಬ್ಬರು ಭಾವೈಕ್ಯತೆ ಸಾರುವ ಪ್ರಮುಖ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಸಾರ್ವಜನಿಕ ಮಸೀದಿ ದರ್ಶನದಿಂದ ಹಿಂದೂ & ಮುಸ್ಲಿಂರ ಭಾವೈಕ್ಯತೆ ಹಿಮ್ಮಡಿಗೊಳಿಸುತ್ತದೆ ಎಂದು ಹರವೆ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ತಿಳಿಸಿದರು. ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಮದೀನಾ ಮಸ್ಜಿದ್‌ಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಹಾಗೂ ಮದೀನಾ ಮಸ್ಜಿದ್ ಆಶ್ರಯದಲ್ಲಿ ಸೀರತ್ ಪ್ರಯುಕ್ತ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವಸ್ಥಾನಗಳು, ಚರ್ಚ್‌ಗಳಲ್ಲಿ ದೇವರು ಇದ್ದಾನೆ ಎಂದು ಪ್ರಾರ್ಥನೆ ಮಾಡುವಂತೆ ಮುಸ್ಲಿಂ ಸಮುದಾಯವರಿಗೆ ಮಸೀದಿಗಳಲ್ಲಿ ದೇವರು ಕಾಣುತ್ತದೆ. ಆದ್ದರಿಂದ ಅವರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ಆದೇ, ರೀತಿ ಹಿಂದೂಗಳು ದೇವಸ್ಥಾನಗಳಲ್ಲಿ, ಕ್ರೈಸ್ತರು ದೇವಾಲಯಗಳಲ್ಲಿ ಪ್ರಾರ್ಥಿಸುತ್ತಾರೆ.
ಹೀಗಾಗಿ ಮಸೀದಿಗಳು ಸಹ ಪುಣ್ಯ ಕ್ಷೇತ್ರಗಳಾಗಿದ್ದು, ಈ ನಿಟ್ಟಿನಲ್ಲಿ ಮಸೀದಿಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆತಾಗ ಇತರೇ ಧರ್ಮದವರಲ್ಲಿ ಇರುವ ತಪ್ಪು ಗ್ರಹಿಕೆ ಹಾಗೂ ಅಂತರ ದೂರ ಆಗುತ್ತದೆ. ಇದರಿಂದ ಪರಸ್ಪರ ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಕುಂಞ ಮಾತನಾಡಿ, ಮಸೀದಿ ದರ್ಶನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೂ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ಆಗಿದೆ. ಯಾವುದೇ ಮನುಷ್ಯ ಆ ಧರ್ಮದ ಬಗ್ಗೆ ಅರಿವಿಲ್ಲದೇ ಅದರ ಪೂರ್ವ ಪರ ಚಿಂತನೆ ಇಲ್ಲದೇ ದ್ವೇಷ ಮಾಡುವ ಮನೋಭಾವನ್ನು ಬೆಳೆಸಿಕೊಳ್ಳುತ್ತಾನೆ. ಹೀಗಾಗಿ ಇದರ ತಿಳುವಳಿಕೆ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.












Click it and Unblock the Notifications