ಅವನು ಮುಸ್ಲಿಂ, ನಾನು ತಪ್ಪು ಮಾಡುತ್ತಿಲ್ಲ- ದೇವರಿಗೆ ಹಿಂದೂ ಯುವತಿಯ ಪತ್ರ
ಚಾಮರಾಜನಗರ, ಜನವರಿ 17: ದೇವರಿಗೆ ನಾನಾ ಬಗೆಯ ಕೋರಿಕೆಗಳು, ಪ್ರಾರ್ಥನೆಗಳು ಸಲ್ಲಿಸಿರುವುದು, ಬೇಡಿಕೆ ಪತ್ರಗಳನ್ನು ನೀಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಆದರೆ ಚಾಮರಾಜನಗರ ಭಕ್ತನೊಬ್ಬ ಒಂದು ಕುಟುಂಬ ಸರ್ವನಾಶ ಆಗಲೇ ಬೇಕು ಎನ್ನುವ ವಿಚಿತ್ರ ಹಾಗೂ ಆಘಾತಕಾರಿ ಬೇಡಿಕೆಯನ್ನು ದೇವರಿಗೆ ಸಲ್ಲಿಸಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀನಾರಾಯಣ ದೇವಾಲಯದ ಹುಂಡಿ ಎಣಿಕೆಯು ಮಂಗಳವಾರ ನಡೆದಿದ್ದು, ಈ ವೇಳೆ ಭಕ್ತರ ಕೋರಿಕೆ ಪತ್ರಗಳು ಸಿಕ್ಕಿದೆ. ಅದರಲ್ಲಿ, ಬಳ್ಳಾರಿ ಜಿಲ್ಲೆ ನಮೂದಿಸಿರುವ ಭಕ್ತನೋರ್ವ "ಹನುಮಾರ್ ರಾಮ ನಾಯಕ ಎಂಬಾತ ಬಾಯಲ್ಲಿ ರಕ್ತ ಕಾರಿ ಬಿದ್ದು ಸಾಯಬೇಕು. ಇದನ್ನು ನೋಡಿ ನೀಲಾಬಾಯಿ ಕೊರಗಿ ಕೊರಗಿ ಸಾಯಬೇಕು, ನೀಲಗಿರಿ ನಾಯಕ, ಲೋಕೇಶಿ ನಾಯಕ, ಮುಕ್ಕಿಬಾಯಿ, ಇವರೆಲ್ಲರೂ ಕೂಡಾ ಅವರನ್ನು ನೋಡಿ ನರಳಿ ಸಾಯಬೇಕು, ಅವರುಗಳು ನಮ್ಮ ಮನೆಯ ಹತ್ತಿರವೇ ಬಾರದ ಹಾಗೆ ಮಾಡಬೇಕು, ಇವರೆಲ್ಲರೂ ಒಂದು ವರ್ಷದ ಒಳಗೆ ಸಾಯಬೇಕು ಎಂದು ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿರುವುದು ಬೆಳಕಿಗೆ ಬಂದಿದೆ.
ಬಳ್ಳಾರಿ ಭಕ್ತನ ಕಾಗದ ಓದಿದ ಹುಂಡಿ ಎಣಿಕೆ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಈ ರೀತಿ ದೇವರಿಗೆ ಸಲ್ಲಿಸುವ ಬೇಡಿಕೆ ಇರುತ್ತವೆಯೇ..? ಸಾವನ್ನು ಬಯಸುವ ಮಟ್ಟಿಗೆ ಆತ ನೊಂದಿರುವವನೇ..? ಎಂದು ಹೌಹಾರಿದ್ದಾರೆ.

ಇನ್ನು ಲಕ್ಷ್ಮೀನಾರಾಯಣ ದೇವಾಲಯದ ಹುಂಡಿಯಲ್ಲಿ ಮತ್ತೊಂದು ಪತ್ರ ಸಿಕ್ಕಿದೆ. ಹುಂಡಿಯಲ್ಲಿ ಒಂದು ಅಂತರ ಧರ್ಮೀಯ ಪ್ರೀತಿ ಪತ್ರವೂ ಸಿಕ್ಕಿದೆ. ಅದರಲ್ಲಿ, ಯುವತಿಯೊಬ್ಬಳು ಶಾಹಿದ್ ಖಾನ್ ವರ್ಷಕ್ಕೆ ಒಂದು ಬಾರಿಯಾದರೂ ದಿಲ್ಲಿಯಿಂದ ಬರಬೇಕು, ನಾನು ಹಿಂದೂ ಅವನು ಮುಸ್ಲಿಂ ಆದರೆ ನಾನು ತಪ್ಪು ಮಾಡುತ್ತಿಲ್ಲ. ನನಗೆ ಅವನಿಷ್ಟ ಅವನಿಗೆ ನಾನು ಇಷ್ಟ. ನನ್ನ ಜೀವನವೇ ಅವನು, ಈ ಬೇಡಿಕೆ ಈಡೇರಿದರೆ ಪ್ರತಿ ತಿಂಗಳೊಮ್ಮೆ ನಿನ್ನ ಸನ್ನಿಧಿಗೆ ಬರುವೆ ಎಂದು ಯುವತಿ ಕಾಗದದಲ್ಲಿ ಬರೆದು ಹರಕೆ ಕಟ್ಟಿಕೊಂಡಿದ್ದಾರೆ.
ಮತ್ತೊಂದು ಕಾಗದದಲ್ಲಿ ನರಸಿಂಹ ಸ್ವಾಮಿ ಈ ನಂಬರ್‌ಗಳಿಗೆ ಮೊದಲನೇ ಬಹುಮಾನ ಬರುವಂತೆ ಮಾಡು ನಿನ್ನ ಹುಂಡಿಗೆ 101 ರೂಪಾಯಿ ಕಾಣಿಕೆ ಹಾಕುವುದಾಗಿ ಲಾಟರಿ ಟಿಕೆಟ್ ನಂಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.
ಇನ್ನು ಕೊಳ್ಳೇಗಾಲ ನಗರದಲ್ಲಿನ ಲಕ್ಷ್ಮೀನಾರಾಯಣ ದೇವಾಲಯದ ಹುಂಡಿಯಲ್ಲಿ 1,87,565 ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications